×
Ad

ಕೇರಳ: 5 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣ; ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ

Update: 2023-11-14 13:04 IST

ಆರೋಪಿ ಅಶ‍್ಫಾಕ್ ಆಲಂ‌ (PTI)

ಎರ್ನಾಕುಲಂ: ಜುಲೈ 28ರಂದು ಕೇರಳದ ಆಳುವದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಆರೋಪಿ ಅಶ‍್ಫಾಕ್ ಆಲಂಗೆ ಎರ್ನಾಕುಲಂ ಪೋಕ್ಸೊ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.

ವಿಚಾರಣೆಯ ನೇತೃತ್ವ ವಹಿಸಿದ್ದ ನ್ಯಾ. ಕೆ. ಸೋಮನ್ ಅವರು ನವೆಂಬರ್ 14ರಂದು ಬೆಳಗ್ಗೆ 11 ಗಂಟೆಗೆ ತಮ್ಮ ತೀರ್ಪನ್ನು ಪ್ರಕಟಿಸಿದರು. ಪ್ರಾಥಮಿಕ ಮಾಹಿತಿ ವರದಿ ದಾಖಲಾದ 30 ದಿನಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿದ್ದ ಪೊಲೀಸರು, ನ್ಯಾಯಾಲಯದೆದುರು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

28 ವರ್ಷದ ಆರೋಪಿ ಆಲಂ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಾದ 302 (ಹತ್ಯೆ), 376 2(ಜೆ) (ಅಪ್ರಾಪ್ತ ಬಾಲಕಿಯ ಅತ್ಯಾಚಾರ), 366ಎ (ಅಪ್ರಾಪ್ತ ಬಾಲಕಿಯನ್ನು ಹೊತ್ತುಕೊಂಡು ಹೋಗುವುದು) ಹಾಗೂ 364 (ಹತ್ಯೆಗೈಯ್ಯುವ ಉದ್ದೇಶದಿಂದ ಅಪಹರಣ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದಲ್ಲದೆ, ಬಿಹಾರದ ವಲಸೆ ಕಾರ್ಮಿಕನಾದ ಆಲಂ ವಿರುದ್ಧ ಪೋಕ್ಸೊ ಕಾಯ್ದೆ, ಬಾಲ ನ್ಯಾಯ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಅಕ್ಟೋಬರ್ 4ರಂದು ಪ್ರಾರಂಭವಾಗಿದ್ದ ವಿಚಾರಣೆಯು ಕೇವಲ 26 ದಿನಗಳಲ್ಲಿ ಮುಕ್ತಾಯಗೊಂಡಿತು. ಮೃತ ಬಾಲಕಿಯು ಬಿಹಾರದ ದಂಪತಿಯ ಪುತ್ರಿಯಾಗಿದ್ದಳು. ಆಕೆಯ ಮೃತದೇಹವು ಜುಲೈ 29ರಂದು ಆಳುವ ಮಾರುಕಟ್ಟೆಯ ಹಿಂಭಾಗದ ಜೌಗು ಪ್ರದೇಶವೊಂದರಲ್ಲಿ ಚೀಲದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ 41 ಸಾಕ್ಷಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು ಹಾಗೂ 13 ದೋಷಾರೋಪಗಳಲ್ಲಿ ಆಲಂ ಅಪರಾಧಿ ಎಂಬ ಸಂಗತಿಯನ್ನು ನ್ಯಾಯಾಲಯ ಪತ್ತೆ ಹಚ್ಚಿತ್ತು.

ಅಪರಾಧಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಆಗ್ರಹಿಸಿತ್ತು. ಮೃತ ಬಾಲಕಿಯ ಪೋಷಕರೂ ಕೂಡಾ ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ಅಪರಾಧಿಗೆ ಮರಣ ದಂಡನೆ ವಿಧಿಸಬೇಕು ಎಂದು ಮನವಿ ಮಾಡಿದ್ದರು.

ಆಲಂಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿ ಮರಣ ದಂಡನೆಯನ್ನು ವಿಧಿಸಿದರೆ, ಪೋಕ್ಸೊ ಕಾಯ್ದೆಯ ಸೆಕ್ಷನ್ ಗಳಡಿ ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಯಿತು. ಆಲಂ ಯಾವುದೇ ಅನುಕಂಪಕ್ಕೆ ಅರ್ಹನಲ್ಲ ಎಂದು ಈ ತೀರ್ಪನ್ನು ಪ್ರಕಟಿಸುವಾಗ ನ್ಯಾಯಾಲಯವು ಅಭಿಪ್ರಾಯ ಪಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News