ಖ್ಯಾತ ಬಾನುಲಿ ನಿರೂಪಕ ಅಮೀನ್ ಸಯಾನಿ ನಿಧನ
Update: 2024-02-21 12:21 IST
ಅಮೀನ್ ಸಯಾನಿ (Photo:X/Ameen Sayani)
ಮುಂಬೈ: “ಬಿನಾಕ ಗೀತ್ ಮಾಲಾ” ಕಾರ್ಯಕ್ರಮದ ಹಿಂದಿನ ಜನಪ್ರಿಯ ಧ್ವನಿಯಾಗಿದ್ದ ಅಮೀನ್ ಸಯಾನಿ ಅವರು ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು,
ಮಂಗಳವಾರ ರಾತ್ರಿ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರ ಜೀವ ಉಳಿಸಲು ಸಾಧ್ಯವಾಗಿಲ್ಲ. ಅವರು ಮಂಗಳವಾರ ರಾತ್ರಿ 7 ಗಂಟೆಗೆ ಎಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಪುತ್ರ ರಾಜಿಲ್ ಸಯಾನಿ ಮಾಹಿತಿ ನೀಡಿದ್ದಾರೆ.
ರೇಡಿಯೋ ಸಿಲಾನ್‌ನ ಜನಪ್ರಿಯ ಬಿನಾಕ ಗೀತ್ ಮಾಲಾ ಕಾರ್ಯಕ್ರಮದಲ್ಲಿ ಅಮೀನ್ ಅವರ “ನಮಸ್ಕಾರ್ ಭಾಯಿಯೋಂ ಔರ್ ಬೆಹನೋ, ಮೈ ಆಪ್ಕಾ ದೋಸ್ಟ್ ಅಮೀನ್ ಸಯಾನಿ ಬೋಲ್ ರಹಾ ಹೂಂ” ಮಾತುಗಳು ಈಗಲೂ ಶ್ರೋತೃಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಅಮೀನ್ ಅವರು ಮುಂಬೈಯಲ್ಲಿ ಡಿಸೆಂಬರ್ 31, 1932ರಂದು ಜನಿಸಿದ್ದರು.