×
Ad

ಅರಣ್ಯ ಸಂರಕ್ಷಣಾ ಕಾಯಿದೆಯ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಐಎಎಸ್‌ ಅಧಿಕಾರಿಗಳು

ಅರಣ್ಯ (ಸಂರಕ್ಷಣಾ) ಕಾಯಿದೆ 1980 ಇದರ ಪ್ರಸ್ತಾವಿತ ತಿದ್ದುಪಡಿಗೆ ಅನುಮೋದನೆ ನೀಡದಂತೆ 100ಕ್ಕೂ ಅಧಿಕ ಮಾಜಿ ಐಎಎಸ್‌ ಅಧಿಕಾರಿಗಳು ಸಂಸದರನ್ನು ಆಗ್ರಹಿಸಿದ್ದಾರೆ. ಈ ತಿದ್ದುಪಡಿಗಳು ಹಲವಾರು ಲೋಪಗಳಿಂದ ಕೂಡಿವೆ ಹಾಗೂ ತಪ್ಪುದಾರಿಗೆಳೆಯುವಂತಿವೆ ಎಂದು ಅವರು ಆರೋಪಿಸಿದ್ದಾರೆ.

Update: 2023-07-13 15:18 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಅರಣ್ಯ (ಸಂರಕ್ಷಣಾ) ಕಾಯಿದೆ 1980 ಇದರ ಪ್ರಸ್ತಾವಿತ ತಿದ್ದುಪಡಿಗೆ ಅನುಮೋದನೆ ನೀಡದಂತೆ 100ಕ್ಕೂ ಅಧಿಕ ಮಾಜಿ ಐಎಎಸ್‌ ಅಧಿಕಾರಿಗಳು ಸಂಸದರನ್ನು ಆಗ್ರಹಿಸಿದ್ದಾರೆ. ಈ ತಿದ್ದುಪಡಿಗಳು ಹಲವಾರು ಲೋಪಗಳಿಂದ ಕೂಡಿವೆ ಹಾಗೂ ತಪ್ಪುದಾರಿಗೆಳೆಯುವಂತಿವೆ ಎಂದು ಅವರು ಆರೋಪಿಸಿದ್ದಾರೆ.

ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ 2023 ಅನ್ನು ಮಾರ್ಚ್‌ ತಿಂಗಳಿನಲ್ಲಿ ಲೋಕಸಭೆಯಲ್ಲಿ ಮಂಡಿಸಿ ನಂತರ ಜಂಟಿ ಸಂಸದೀಯ ಸಮಿತಿ ಮುಂದಿರಿಸಲಾಗಿತ್ತು. ಕಳೆದ ವಾರ ಸಮಿತಿಯು ಈ ಮಸೂದೆಗೆ ಬೆಂಬಲ ನೀಡಿತ್ತು. ಈ ಸಮಿತಿಯ 31 ಸದಸ್ಯರಲ್ಲಿ 18 ಮಂದಿ ಆಡಳಿತ ಬಿಜೆಪಿ ಸಂಸದರಾಗಿದ್ದಾರೆ. ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಇದನ್ನು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆಯಿದೆ.

ಈ ತಿದ್ದುಪಡಿಗಳು ಹಲವಾರು ಭದ್ರತೆಗೆ ಸಂಬಂಧಿಸಿದ ಹಾಗೂ ಇತರ ಪ್ರಮುಖ ಯೋಜನೆಗಳಿಗೆ ವೇಗ ನೀಡುವ ಉದ್ದೇಶವನ್ನು ಹೊಂದಿವೆ ಎಂದು ಸರ್ಕಾರ ಹೇಳುತ್ತಿದ್ದರೂ, ಅರಣ್ಯ ಜಮೀನನ್ನು ವಾಣಿಜ್ಯ ಉದ್ದೇಶಗಳಿಗೆ ಒದಗಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ವಿಪಕ್ಷಗಳ ಹಲವು ಸದಸ್ಯರು ಹಾಗೂ ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಗಡಿಯಿಂದ 100 ಕಿಮೀ ಒಳಗಿನ ಪ್ರದೇಶಗಳಲ್ಲಿ ಭದ್ರತೆಗೆ ಸಂಬಂಧಿಸಿದ ಯೋಜನೆಗಳಿಗಾಗಿ ಅರಣ್ಯ ಜಮೀನನ್ನು ಪಡೆಯಲು ಪೂರ್ವಾನುಮತಿ ಅಗತ್ಯವಿಲ್ಲ ಎಂದು ಈ ತಿದ್ದುಪಡಿ ಹೇಳುತ್ತದೆ. ಇದು ದೇಶದ ಸಂಪೂರ್ಣ ಈಶಾನ್ಯ ಭಾಗವನ್ನು ಹಾಗೂ ಹಿಮಾಲಯ ಭಾಗವನ್ನು ಒಳಗೊಳ್ಳಬಹುದು ಹಾಗೂ ಇದು ಪರಿಸರ ಸೂಕ್ಷ್ಮ ಮತ್ತು ಜೀವವೈವಿಧ್ಯತೆಯ ತಾಣವನ್ನು ಅಪಾಯಕ್ಕೊಡ್ಡಿದಂತೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

ಬುಧವಾರದಂದು 105 ಮಾಜಿ ಐಎಎಸ್‌ ಅಧಿಕಾರಿಗಳ ಒಂದು ಗುಂಪು ಈ ತಿದ್ದುಪಡಿಗೆ ವಿರೋಧಿಸಿ ಈ ಮಸೂದೆಯನ್ನು ನಿಯಮದಂತೆ ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಕುರಿತಾದ ಸಂಸದೀಯ ಸಮಿತಿ ಮುಂದಿಡಬೇಕಾಗಿತ್ತು ಬದಲು ಒಬ್ಬರನ್ನು ಹೊರತುಪಡಿಸಿ ಎಲ್ಲಾ ಸದಸ್ಯರು ಆಡಳಿತ ಪಕ್ಷದವರಾಗಿರುವ ಒಂದು ನಿರ್ದಿಷ್ಟ ಸಮಿತಿ ಮುಂದಿಡಬಾರದಾಗಿತ್ತು ಎಂದು ಕಾನ್‌ಸ್ಟಿಟ್ಯೂಶನಲ್‌ ಕಾಂಡಕ್ಟ್‌ ಗ್ರೂಪ್‌ ಭಾಗವಾಗಿರುವ ಮಾಜಿ ಅಧಿಕಾರಿಗಳು ಹೇಳಿದ್ದಾರೆ.

ಈ ಮಸೂದೆ ಕಾನೂನು ಆದಲ್ಲಿ ಅರಣ್ಯ ಜಮೀನನ್ನು ಉದಾರವಾಗಿ ಅರಣ್ಯೇತರ ಉದ್ದೇಶಗಳಿಗೆ ನೀಡಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಭೀತಿ ವ್ಯಕ್ತಪಡಿಸಿದ್ದಾರೆ.

ಈ ಮಸೂದೆಯನ್ನು ಅದರ ಈಗಿನ ಸ್ವರೂಪದಲ್ಲಿ ಅಂಗೀಕರಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News