ಜನಗಣತಿ ವಿಳಂಬದ ನಡುವೆ 2020ರಿಂದ ಜನನಗಳು ಮತ್ತು ಸಾವುಗಳ ಕುರಿತು ಪ್ರಮುಖ ವರದಿಗಳು ಬಾಕಿ; ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಾದ ಜನಗಣತಿ ಕಾರ್ಯ 2021ರಿಂದಲೂ ಬಾಕಿಯುಳಿದಿದ್ದು ಈ ವರ್ಷವೂ ಅದನ್ನು ನಡೆಸುವ ಸಾಧ್ಯತೆ ಕಡಿಮೆಯಿರುವುದರಿಂದ ಕೇಂದ್ರ ಗೃಹ ಸಚಿವಾಲಯವು ದೇಶದಲ್ಲಿ ಜನನಗಳು ಮತ್ತು ಮರಣಗಳ ಕುರಿತು ಕನಿಷ್ಠ ಎರಡು ವರದಿಗಳನ್ನು ಕಳೆದ ಐದು ವರ್ಷಗಳಿಂದ ಬಿಡುಗಡೆಗೊಳಿಸಿಲ್ಲ ಎಂದು The Hindu ವರದಿ ಮಾಡಿದೆ.
‘ನಾಗರಿಕ ನೋಂದಣಿ ವ್ಯವಸ್ಥೆಯನ್ನು ಆಧರಿಸಿದ ಭಾರತದ ಪ್ರಮುಖ ಅಂಕಿಅಂಶಗಳು’ ಮತ್ತು ‘ಸಾವಿನ ಕಾರಣದ ವೈದ್ಯಕೀಯ ಪ್ರಮಾಣೀಕರಣ ಕುರಿತು ವರದಿ’ ಇವು 2020ರಲ್ಲಿ ಬಿಡುಗಡೆಗೊಂಡಿದ್ದೇ ಕೊನೆ. ರಾಷ್ಟ್ರೀಯ ಅಪರಾಧ ದಾಖಲೆ ಘಟಕ(ಎನ್‌ಸಿಆರ್‌ಬಿ)ದ 2023ನೇ ಸಾಲಿನ ‘ಭಾರತದಲ್ಲಿ ಅಪರಾಧ’ ವಾರ್ಷಿಕ ವರದಿಯೂ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ.
2020ರ ನಾಗರಿಕ ನೋಂದಣಿ ವ್ಯವಸ್ಥೆ ವರದಿಯ ಪ್ರಕಾರ ಪ್ರಮುಖ ಅಂಕಿಅಂಶಗಳು ದೇಶಾದ್ಯಂತ ದಾಖಲಾದ ಜನನಗಳು,ಸಾವುಗಳು ಮತ್ತು ಮೃತಶಿಶು ಜನನಗಳಂತಹ ಪ್ರಮುಖ ಘಟನೆಗಳ ಸಂಕಲನವಾಗಿದ್ದು,ಪ್ರಾಥಮಿಕ ಆರೋಗ್ಯ ರಕ್ಷಣೆ,ಕುಟುಂಬ ಯೋಜನೆ,ತಾಯಿ ಮತ್ತು ಮಗು ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಲು,ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಇತ್ಯಾದಿ ಕಾರ್ಯಗಳಿಗೆ ಮುಖ್ಯವಾಗಿದೆ. ರಾಜ್ಯಗಳು ತಮ್ಮ ಅಂಕಿಅಂಶಗಳನ್ನು ಭಾರತದ ರಿಜಿಸ್ಟ್ರಾರ್-ಜನರಲ್‌ಗೆ ಕಳುಹಿಸುತ್ತವೆ.
ಕೇಂದ್ರ ಸರಕಾರವು 2023ರಲ್ಲಿ ಜಾರಿಗೆ ತಂದಿರುವ ಜನನ ಮತ್ತು ಮರಣಗಳ ನೋಂದಣಿ(ತಿದ್ದುಪಡಿ) ಕಾಯ್ದೆಯು 2023 ಅಕ್ಟೋಬರ್ 1ರಿಂದ ದೇಶದಲ್ಲಿ ಸಂಭವಿಸುವ ಎಲ್ಲ ಜನನಗಳು ಮತ್ತು ಸಾವುಗಳನ್ನು ಕೇಂದ್ರೀಯ ಪೋರ್ಟಲ್ crsorgi.gov.in ಮೂಲಕ ಡಿಜಿಟಲ್ ರೂಪದಲ್ಲಿ ನೋಂದಾಯಿಸುವುದನ್ನು ಕಡ್ಡಾಯಗೊಳಿಸಿದೆ. ಇದರಿಂದಾಗಿ ಕೇಂದ್ರವು ನೈಜ ಸಮಯದ ಡೇಟಾವನ್ನು ಪಡೆಯಬಹುದು.
ಲಭ್ಯ ಮಾಹಿತಿಗಳ ಪ್ರಕಾರ ಹಿಮಾಚಲ ಪ್ರದೇಶ, ಕರ್ನಾಟಕ, ದಿಲ್ಲಿ, ಚಂಡಿಗಡ, ಮಿಜೋರಮ್, ಗೋವಾ, ಅರುಣಾಚಲ ಪ್ರದೇಶದಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 2022ರವರೆಗೆ ವರದಿಗಳನ್ನು ಪ್ರಕಟಿಸಿವೆ. ಕೇರಳ ತನ್ನ ಪ್ರಮುಖ ಅಂಕಿಅಂಶಗಳ ವರದಿಯನ್ನು 2021ರಲ್ಲಿ ಕೊನೆಯದಾಗಿ ಪ್ರಕಟಿಸಿದ್ದರೆ ಮಿಜೋರಮ್ 2023ರ ವರದಿಯನ್ನು ಹೊಂದಿರುವ ಏಕೈಕ ರಾಜ್ಯವಾಗಿದೆ.
2020-21ರಲ್ಲಿ ನಡೆಯಬೇಕಿದ್ದ ಜನಗಣತಿಯು ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ವಿಳಂಬಗೊಂಡಿತ್ತು, ಆದರೆ ಜಾತಿ ಗಣತಿಗಾಗಿ ಪ್ರತಿಪಕ್ಷಗಳಿಂದ ನಿರಂತರ ಆಗ್ರಹಗಳು ಈಗ ಜನಗಣತಿ ಪ್ರಕ್ರಿಯೆಯನ್ನು ತಡೆಹಿಡಿದಿರುವಂತೆ ಕಂಡು ಬರುತ್ತಿದೆ.
ಹಿರಿಯ ಸರಕಾರಿ ಅಧಿಕಾರಿಯೋರ್ವರ ಪ್ರಕಾರ,ಜಾತಿವಾರು ಗಣತಿಗಾಗಿ ಕಾರ್ಯವಿಧಾನಗಳು ಮತ್ತು ಕ್ರಮಗಳಿಗಾಗಿ ಕಳೆದ ಕೆಲವು ತಿಂಗಳುಗಳಿಂದ ಚರ್ಚೆಗಳು ನಡೆಯುತ್ತಿದ್ದರೂ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಜನಗಣತಿಗೆ ಚಾಲನೆ ನೀಡುವ ಆತುರದಲ್ಲಿರಲಿಲ್ಲ. ಪರಿಶಿಷ್ಟ ಜಾತಿಗಳು(ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳು(ಎಸ್‌ಟಿ) ಹೊರತುಪಡಿಸಿ ಸ್ವತಂತ್ರ ಭಾರತದಲ್ಲಿ ಜಾತಿವಾರು ಜನಸಂಖ್ಯೆಯನ್ನು ಎಣಿಕೆ ಮಾಡಲಾಗಿಲ್ಲ.
2011ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಜನಗಣತಿಯೊಂದಿಗೆ ಪ್ರತ್ಯೇಕವಾಗಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ(ಎಸ್‌ಇಸಿಸಿ) ಅಡಿ ಮೊಟ್ಟಮೊದಲ ಜಾತಿ ಎಣಿಕೆಯನ್ನು ನಡೆಸಿತ್ತಾದರೂ ವರದಿಯನ್ನು ಎಂದಿಗೂ ಸಾರ್ವಜನಿಕಗೊಳಿಸಲಾಗಿಲ್ಲ.
2021ರಲ್ಲಿ ಕೇಂದ್ರ ಸರಕಾರವು ಸಲ್ಲಿಸಿದ ಅಫಿಡವಿಟ್ ಪ್ರಕಾರ, ಎಸ್‌ಇಸಿಸಿ ದತ್ತಾಂಶಗಳು ‘ತಪ್ಪುಗಳಿಂದ’ ತುಂಬಿದ್ದು,46 ಲಕ್ಷಕ್ಕೂ ಅಧಿಕ ಜಾತಿ ಹೆಸರುಗಳನ್ನು ಕಂಡುಕೊಂಡಿದೆ,ಆದರೆ 1931ರ ಗಣತಿಯು ಕೇವಲ 4,147 ಜಾತಿ ಹೆಸರುಗಳನ್ನು ದಾಖಲಿಸಿತ್ತು.
ಈ ವರ್ಷ ಜನಗಣತಿ ನಡೆಯಬೇಕಿದ್ದರೆ ಸರಕಾರವು ನವಂಬರ್ 2024ರೊಳಗೆ ಅಧಿಸೂಚನೆಯನ್ನು ಹೊರಡಿಸಬೇಕಿತ್ತು. ಎರಡು ಹಂತಗಳಲ್ಲಿ ಜನಗಣತಿ ನಡೆಸಲು ಹತ್ತು ತಿಂಗಳ ಅವಧಿಯು ಸಾಮಾನ್ಯವಾಗಿ ಎ.1ರಿಂದ ಆರಂಭಗೊಳ್ಳುತ್ತದೆ ಮತ್ತು ಇದು ಮೊದಲ ಡಿಜಿಟಲ್ ಜನಗಣತಿಯಾಗಿರುವುದರಿಂದ 30 ಲಕ್ಷಕ್ಕೂ ಅಧಿಕ ಗಣತಿದಾರರಿಗೆ ಹೊಸದಾಗಿ ತರಬೇತಿಯು ಅಗತ್ಯವಾಗುತ್ತದೆ,ಇದಕ್ಕೆ ಮೂರರಿಂದ ನಾಲ್ಕು ತಿಂಗಳುಗಳು ಬೇಕಾಗುತ್ತವೆ ಎಂದು ಮಾಜಿ ಜನಗಣತಿ ಅಧಿಕಾರಿಯೋರ್ವರು ತಿಳಿಸಿದರು.
ಫೆ.1ರಂದು ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಮುಂಗಡಪತ್ರದಲ್ಲಿ ಜನಗಣತಿಯನ್ನು ನಡೆಸಲು ಪ್ರತ್ಯೇಕ ಮೊತ್ತವನ್ನು ಹಂಚಿಕೆ ಮಾಡಲಾಗಿಲ್ಲ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.