×
Ad

ಮಹಾರಾಷ್ಟ್ರ ವಿಧಾನಭಾ ಚುನಾವಣೆಗೂ ಮುನ್ನ ವಿಪಕ್ಷಗಳ ಮೈತ್ರಿಕೂಟ 160 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಭರವಸೆ ನೀಡಿದ್ದ ಇಬ್ಬರು ವ್ಯಕ್ತಿಗಳು: ಶರದ್ ಪವಾರ್

Update: 2025-08-09 18:52 IST

ಶರದ್ ಪವಾರ್ | PC : ANI 

ನಾಗ್ಪುರ: 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ನನ್ನನ್ನು ಭೇಟಿಯಾಗಿದ್ದ ಇಬ್ಬರು, ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ 288 ವಿಧಾನಸಭಾ ಸ್ಥಾನಗಳ ಪೈಕಿ 160 ಸ್ಥಾನಗಳ ಗೆಲುವು ದೊರಕಿಸಿಕೊಡುವ ಖಾತರಿ ನೀಡಿದ್ದರು ಎಂದು ಶನಿವಾರ ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಆರೋಪಿಸಿದ್ದಾರೆ.

ನಾಗ್ಪುರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್, “ನಾನು ಆ ಇಬ್ಬರನ್ನು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದ್ದೆ” ಎಂದು ತಿಳಿಸಿದರು.

ಮತಗಳ್ಳತನ ನಡೆಸಲಾಗಿದೆ ಎಂದು ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಆರೋಪಿಸಿದ ಬೆನ್ನಿಗೇ, ಶರದ್ ಪವಾರ್ ಈ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ.

“2024ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯುವುದಕ್ಕೂ ಮುನ್ನ ಇಬ್ಬರು ವ್ಯಕ್ತಿಗಳು ಹೊಸ ದಿಲ್ಲಿಯಲ್ಲಿ ನನ್ನನ್ನು ಭೇಟಿಯಾಗಿದ್ದರು. ಅವರು ಮಹಾರಾಷ್ಟ್ರದ 288 ಸ್ಥಾನಗಳ ಪೈಕಿ 160 ಸ್ಥಾನಗಳಲ್ಲಿ ಖಾತ್ರಿಯಾಗಿ ಗೆಲುವು ಸಾಧಿಸಲು ನೆರವು ನೀಡುವ ಭರವಸೆ ನೀಡಿದ್ದರು” ಎಂದು ಅವರು ಹೇಳಿದರು.

“ನಾನು ಅವರನ್ನು ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದೆ. ಆದರೆ, ಅವರು ತಮಗೆ ಹೇಳಿದ್ದನ್ನು ನಿರ್ಲಕ್ಷಿಸಿದರು. ವಿರೋಧ ಪಕ್ಷಗಳಾದ ನಾವು ಇಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದು ಹಾಗೂ ನಾವು ನೇರವಾಗಿ ಜನರ ಬಳಿಗೆ ಹೋಗಬೇಕು ಎಂಬ ದೃಷ್ಟಿಕೋನವನ್ನು ಅವರು ಹೊಂದಿದ್ದರು” ಎಂದು ಮಾಜಿ ಕೇಂದ್ರ ಸಚಿವರೂ ಆದ ಶರದ್ ಪವಾರ್ ತಿಳಿಸಿದರು.

ಆ ಇಬ್ಬರು ವ್ಯಕ್ತಿಗಳು ಹೇಳಿದ್ದಕ್ಕೆ ನಾನು ಹೆಚ್ಚು ಪ್ರಾಮುಖ್ಯತೆ ನೀಡದೆ ಇದ್ದುದರಿಂದ, ನಾನು ಅವರ ಹೆಸರು ಹಾಗೂ ಸಂಪರ್ಕ ವಿವರಗಳನ್ನು ಹೊಂದಿಲ್ಲ ಎಂದೂ ಅವರು ಹೇಳಿದರು.

2024ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 132 ಸ್ಥಾನಗಳು, ಶಿವಸೇನೆ (ಶಿಂದೆ ಬಣ) ಹಾಗೂ ಎನ್ಸಿಪಿ (ಅಜಿತ್ ಪವಾರ್ ಬಣ) ಕ್ರಮವಾಗಿ 47 ಮತ್ತು 41 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಆದರೆ ಕೆಲ ತಿಂಗಳ ಹಿಂದಷ್ಟೇ 48 ಲೋಕಸಭಾ ಸ್ಥಾನಗಳ ಪೈಕಿ 30 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ, ಬಿಜೆಪಿ ಮೈತ್ರಿಕೂಟದ ಈ ಗೆಲುವಿಗೆ ಇವಿಎಂ ಅಕ್ರಮ ಹಾಗೂ ದತ್ತಾಂಶ ತಿರುಚುವಿಕೆ ಕಾರಣ ಎಂದು ಆರೋಪಿಸಿತ್ತು.

ಇದಕ್ಕೂ ಮುನ್ನ, ಬಿಜೆಪಿ ಹಾಗೂ ಚುನಾವಣಾ ಆಯೋಗ ಪರಸ್ಪರ ಕೈಜೋಡಿಸಿದ್ದು, ಚುನಾವಣೆಗಳಲ್ಲಿ ಬೃಹತ್ ಪ್ರಮಾಣದ ವಂಚನೆ ನಡೆಸಿವೆ ಎಂದು ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಫೋಟಕ ಆರೋಪ ಮಾಡಿದ್ದರು. ತಮ್ಮ ಈ ಆರೋಪಕ್ಕೆ ಪುರಾವೆಯಾಗಿ ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಮತದಾನದ ವಿಶ್ಲೇಷಣೆಯನ್ನು ಪ್ರದರ್ಶಿಸಿದ್ದರು. “ಈ ಕೃತ್ಯವು ಸಂವಿಧಾನದ ವಿರುದ್ಧದ ಅಪರಾಧ” ಎಂದೂ ಅವರು ಬಣ್ಣಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News