×
Ad

ಧನ್ಕರ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಅಮಿತ್ ಶಾ ಹೇಳಿದ್ದೇನು?

Update: 2025-08-25 15:38 IST

ಗೃಹ ಸಚಿವ ಅಮಿತ್ ಶಾ (Photo: PTI)

ಹೊಸದಿಲ್ಲಿ: ಜಗದೀಪ್ ಧನ್ಕರ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ಅಲ್ಲಗಳೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಜಗದೀಪ್ ಧನಕರ್ ಅವರು ತಮ್ಮ ಅನಾರೋಗ್ಯದ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ” ಎಂದು ಹೇಳಿದ್ದಾರೆ.

ANI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅಮಿತ್ ಶಾ, “ಧನಕರ್ ಅವರ ರಾಜೀನಾಮೆ ಪತ್ರ ಸ್ಪಷ್ಟವಾಗಿದೆ. ಅನಾರೋಗ್ಯದ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಅದರಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಉತ್ತಮ ಅವಧಿಗಾಗಿ ಅವರು ಪ್ರಧಾನ ಮಂತ್ರಿ ಹಾಗೂ ಇನ್ನಿತರ ಸಚಿವರು ಮತ್ತು ಸರಕಾರಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ” ಎಂದು ಬೊಟ್ಟು ಮಾಡಿದ್ದಾರೆ.

ಜಗದೀಪ್ ಧನಕರ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ವಿರೋಧ ಪಕ್ಷಗಳ ಆರೋಪಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಸತ್ಯ ಮತ್ತು ಸುಳ್ಳಿನ ವ್ಯಾಖ್ಯಾನವನ್ನು ಕೇವಲ ವಿರೋಧ ಪಕ್ಷಗಳ ಹೇಳಿಕೆಗಳ ಆಧಾರದಲ್ಲಿ ಮಾಡಬಾರದು. ಮಾಜಿ ಉಪ ರಾಷ್ಟ್ರಪತಿಗಳ ರಾಜೀನಾಮೆ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸಬಾರದು ಎಂದು ಹೇಳಿದರು.

“ಸತ್ಯ ಮತ್ತು ಸುಳ್ಳಿನ ಬಗ್ಗೆ ನಿಮ್ಮ ವ್ಯಾಖ್ಯಾನವು ವಿರೋಧ ಪಕ್ಷದವರು ಹೇಳುವುದನ್ನು ಆಧರಿಸಿದೆ ಎಂದು ತೋರುತ್ತದೆ. ಈ ವಿಚಾರದಲ್ಲಿ ನಾವು ಅನಗತ್ಯ ವಿವಾದ ಸೃಷ್ಟಿಸಬಾರದು. ಧನಕರ್ ಅವರು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದರು ಹಾಗೂ ಸಂವಿಧಾನದ ಪ್ರಕಾರ ತಮ್ಮ ಕರ್ತವ್ಯಗಳನ್ನು ನಿಭಾಯಿಸಿದ್ದರು. ಅವರು ತಮ್ಮ ವೈಯಕ್ತಿಕ ಆರೋಗ್ಯದ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ವಿಷಯದ ಕುರಿತು ಯಾರೂ ಹೆಚ್ಚು ಚರ್ಚೆ ನಡೆಸಕೂಡದು” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News