×
Ad

ಆಂಧ್ರಪ್ರದೇಶ | ತಿರುಪತಿಯಲ್ಲಿ 9 ವರ್ಷದ ಬಾಲಕನ ಮೃತ್ಯು: ಜೀತದಾಳು ಪದ್ಧತಿ ಬಯಲಿಗೆ

Update: 2025-05-23 21:53 IST

PC : newindianexpress.com

ನೆಲ್ಲೂರು: ಅಕ್ರಮವಾಗಿ ಬಂಧನದಲ್ಲಿಡಲಾಗಿದ್ದ ಒಂಬತ್ತು ವರ್ಷದ ಯಾನಡಿ ವೆಂಕಟೇಶು ಎಂಬ ಬಾಲಕ ಮೃತಪಟ್ಟ ಬೆನ್ನಿಗೇ, ಈ ಸಂಬಂಧ, ತಿರುಪತಿ ಜಿಲ್ಲೆಯ ಸತ್ಯವೇದು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಎನ್.ಮುತ್ತು (60), ಆತನ ಪತ್ನಿ ಧನಭಾಗ್ಯಂ (52) ಹಾಗೂ ಅವರಿಬ್ಬರ ಪುತ್ರ ಎಂ.ರಾಜಶೇಖರ್ (32) ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ತಿರುಪತಿ ಜಿಲ್ಲೆಯ ಸತ್ಯವೇದು ಮಂಡಲದ ಎನ್.ಅಗ್ರಹಾರಂ ಗ್ರಾಮದ ನಿವಾಸಿಗಳಾಗಿದ್ದಾರೆ.

ಈ ಕುರಿತು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರವಿಕುಮಾರ್, ಗುಡೂರ್ ಮಂಡಲದ ಚವತಪಲೇಂ ನಿವಾಸಿಯಾದ ಮೃತ ಬಾಲಕನ ತಾಯಿ ಅಂಕಮ್ಮ ತನ್ನ ಪತಿ ಪ್ರಕಾಶ್ ಹಾಗೂ ತಮ್ಮಿಬ್ಬರ ಮೂವರು ಮಕ್ಕಳೊಂದಿಗೆ ನೆಲ್ಲೂರು ಜಿಲ್ಲೆಯ ದುತ್ತಲೂರ್ ಮಂಡಲದಲ್ಲಿನ ತೋಟವೊಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಈ ಕುಟುಂಬವನ್ನು ಸಂಪರ್ಕಿಸಿದ್ದ ಸತ್ಯವೇಡು ಮಂಡಲದಲ್ಲಿನ ಎನ್.ಆರ್.ಅಗ್ರಹಾರಂ ನಿವಾಸಿಗಳಾದ ಮುತ್ತು ಹಾಗೂ ಧನಭಾಗ್ಯಂ ಎಂಬ ದಂಪತಿಗಳು, ಅವರಿಗೆ ತಿಂಗಳಿಗೆ 10,000 ರೂ. ವೇತನ ನೀಡುವ ಭರವಸೆ ನೀಡಿ, 15,000 ರೂ. ಮುಂಗಡ ಹಣವನ್ನೂ ನೀಡಿದ್ದರು ಎಂದು ಅವರು ಹೇಳಿದ್ದಾರೆ.

ಈ ಕುಟುಂಬವು ಮುತ್ತು ಕುಟುಂಬದ ಬಳಿ ಒಂದು ವರ್ಷಗಳ ಕಾಲ ಕೃಷಿ ಕೆಲಸ ಹಾಗೂ ಬಾತುಕೋಳಿಗಳ ಸಾಕಾಣಿಕೆಯಂತಹ ಕೆಲಸಗಳನ್ನು ಕಠಿಣ ಪರಿಸ್ಥಿತಿಯಲ್ಲಿ ನಿರ್ವಹಿಸಿತ್ತು. ಒಂದು ವರ್ಷದ ನಂತರ, ವೇತನವನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಿದರೂ, ಮುತ್ತು ಆ ಬೇಡಿಕೆಯನ್ನು ನಿರಾಕರಿಸಿದ್ದರು. ನಂತರ, ಅಂಕಮ್ಮಳ ಪತಿ ತೀರಿಕೊಂಡ ಬಳಿಕ, ತನ್ನ ಪತಿಯ ಅಂತ್ಯಕ್ರಿಯೆ ನೆರವೇರಿಸಲು ಆಕೆ ತಮ್ಮ ತವರು ಗ್ರಾಮಕ್ಕೆ ಮರಳಿದ್ದರು ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಅಂಕಮ್ಮಳ ಉಳಿದ ಕುಟುಂಬವೇನಾದರೂ ಕೆಲಸ ಮುಂದುವರಿಸಿದರೆ, ಅವರಿಗೆ ನೀಡಲಾಗಿದ್ದ 25,0000 ರೂ. ಅನ್ನು ಮನ್ನಾ ಮಾಡಲಾಗುವುದು ಎಂದು ಮುತ್ತು ಒಪ್ಪಿಕೊಂಡಿದ್ದಾನೆ. ಆದರೆ, ಕೆಲಸ ಮುಂದುವರಿಸುವುದು ಅಸಾಧ್ಯವಾದಾಗ, ಅಂಕಮ್ಮ ಕೆಲಸವನ್ನು ತೊರೆಯಲು ಪ್ರಯತ್ನಿಸಿದ್ದಾರೆ. ಆದರೆ, ಆಕೆಗೆ 45,000 ರೂ. ಮರುಪಾವತಿಸುವಂತೆ ಸೂಚಿಸಲಾಗಿದೆ. ಆದರೆ, ಅಷ್ಟು ಮೊತ್ತವನ್ನು ತಕ್ಷಣವೇ ವ್ಯವಸ್ಥೆ ಮಾಡಲಾಗದಿದ್ದರಿಂದ, ಅದನ್ನು ವ್ಯವಸ್ಥೆ ಮಾಡಿಕೊಂಡು ಮರಳುವ ಬಯಕೆಯೊಂದಿಗೆ, ಆಕೆ ತನ್ನ ಪುತ್ರನನ್ನು ಮುತ್ತು ಬಳಿ ಬಿಟ್ಟು ತೆರಳಿದ್ದಾರೆ.

ಇದರ ಬೆನ್ನಿಗೇ, ನನ್ನನ್ನು ಕಠಿಣ ದುಡಿಮೆಯಿಂದ ಪಾರು ಮಾಡುವಂತೆ ವೆಂಕಟೇಶು ತನ್ನ ತಾಯಿಯ ಬಳಿ ಗೋಗರೆದಿದ್ದಾನೆ. ಅವರಿಬ್ಬರ ನಡುವೆ ಎಪ್ರಿಲ್ 15ರಂದು ಕೊನೆಯ ಸಂಭಾಷಣೆ ನಡೆದಿದೆ. ಅಂಕಮ್ಮ ದುಡ್ಡಿನೊಂದಿಗೆ ಮರಳಿದಾಗ, ಮುತ್ತು ಹಾರಿಕೆಯ ಉತ್ತರ ನೀಡಿದ್ದಾನೆ. ಮೊದಲಿಗೆ ಬಾಲಕನನ್ನು ಯಾವುದೋ ಕೆಲಸಕ್ಕೆ ದೂರ ಕಳಿಸಲಾಗಿದೆ ಎಂದು ಹೇಳಿದ್ದಾನೆ. ನಂತರ, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾನೆ. ತದನಂತರ, ಆತ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದಾದ ಒಂಬತ್ತು ತಿಂಗಳ ಕಾಲ ಬಾಲಕನನ್ನು ಅತ್ಯಂತ ಕಠಿಣ ಕೆಲಸಗಳಿಗೆ ನಿಯೋಜಿಸಲಾಗಿದೆ. ಆತ ನಾನು ನನ್ನ ತಾಯಿಯ ಬಳಿಗೆ ಮರಳುತ್ತೇನೆ ಎಂದು ಅಳುತ್ತಾ ಗೋಗರೆದಿದ್ದಾನೆ. ಅಂಕಮ್ಮ ಕೂಡಾ ಪದೇ ಪದೇ ತನ್ನ ಪುತ್ರನನ್ನು ಬಿಡುಗಡೆ ಮಾಡುವಂತೆ ಮುತ್ತುವನ್ನು ಗೋಗರೆದಿದ್ದಾರೆ. ಆದರೆ, ಆಕೆಯ ಬೇಡಿಕೆಯನ್ನು ಮುತ್ತು ತಳ್ಳಿ ಹಾಕಿದ್ದಾನೆ. ಇದರ ಬೆನ್ನಿಗೇ, ಮೇ 19ರಂದು ಸತ್ಯವೇಡು ಪೊಲೀಸ್ ಠಾಣೆಯನ್ನು ಸಂಪರ್ಕಿಸಿರುವ ಅಂಕಮ್ಮ, ದೂರನ್ನು ದಾಖಲಿಸಿದ್ದಾಳೆ.

ಈ ದೂರನ್ನು ಆಧರಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಉಸ್ತುವಾರಿಯಲ್ಲಿ ಕ್ಷಿಪ್ರ ಕ್ರಮ ಕೈಗೊಂಡಿರುವ ಪೊಲೀಸರು, ಮೇ 19ರಂದು ಆರೋಪಿಗಳಾದ ಮುತ್ತು, ಆತನ ಪತ್ನಿ ಧನಭಾಗ್ಯಂ ಹಾಗೂ ಅವರಿಬ್ಬರ ಪುತ್ರ ರಾಜಶೇಖರ್ ವಿರುದ್ಧ ಜೀತ ವ್ಯವಸ್ಥೆ ನಿಷೇಧ ಕಾಯ್ದೆ, ಬಾಲ ಕಾರ್ಮಿಕರ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ತನಿಖೆಯ ಸಂದರ್ಭದಲ್ಲಿ ಎಪ್ರಿಲ್ ಆರಂಭದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ವೆಂಕಟೇಶುನನ್ನು ಎಪ್ರಿಲ್ 11ರಂದು ಪುದುಪಾಲೆಂನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿತ್ತು. ಆತನಿಗೆ ಚಿಕಿತ್ಸೆಗೆ ನೀಡಿದ ಹೊರತಾಗಿಯೂ, ಅದಕ್ಕೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ ಎಂಬ ಸಂಗತಿ ಬಯಲಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳೂ ಕೂಡಾ ಈ ದಿನಾಂಕಗಳನ್ನು ದೃಢಪಡಿಸಿದೆ. ತಾವು ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂಬ ಭೀತಿಗೊಳಗಾಗಿರುವ ಆರೋಪಿಗಳು, ತಮ್ಮ ಕುಟುಂಬದ ಸದಸ್ಯರ ನೆರವಿನೊಂದಿಗೆ ಪಾಲಾರ್ ನದಿಯಲ್ಲಿ ಬಾಲಕನ ಮೃತ ದೇಹವನ್ನು ಹೂತು ಹಾಕಿದ್ದಾರೆ.

ಸದ್ಯ ಮೂವರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News