ಪಾಕ್ ಪರ ಬೇಹುಗಾರಿಕೆ ಆರೋಪ: ಮತ್ತೋರ್ವ ಯೂಟ್ಯೂಬರ್ ಜಸ್ಬೀರ್ ಸಿಂಗ್ ಬಂಧನ
ಜಸ್ಬೀರ್ ಸಿಂಗ್ (Photo credit: indiatoday.in)
ಚಂಡೀಗಢ: ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಂಜಾಬ್ ರಾಜ್ಯದ ಮತ್ತೊಬ್ಬ ಯೂಟ್ಯೂಬರ್‌ನನ್ನು ಬಂಧಿಸಲಾಗಿದೆ.
ಆರೋಪಿಯನ್ನು ಜಸ್ಬೀರ್ ಸಿಂಗ್ ಎಂದು ಗುರುತಿಸಲಾಗಿದ್ದು, 'ಜಾನ್ ಮಹಲ್' ಎಂಬ ಯೂಟ್ಯೂಬ್ ವಾಹಿನಿಯನ್ನು ನಡೆಸುತ್ತಿದ್ದ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಓರ್ವ ಪ್ರವಾಸಿ ವ್ಲಾಗರ್‌ನನ್ನು ಬಂಧಿಸಿದ ಬೆನ್ನಿಗೇ, ಈ ಬಂಧನ ನಡೆದಿದೆ. ಬಂಧಿತ ಆರೋಪಿ ಜಸ್ಬೀರ್ ಸಿಂಗ್ ಪಾಕಿಸ್ತಾನದ ಶಕೀರ್ ಎಂಬ ಗುಪ್ತಚರ ಅಧಿಕಾಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಭಾರತ-ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಜಸ್ಬೀರ್ ಸಿಂಗ್‌ನನ್ನು ಬಂಧಿಸಲಾಗಿದೆ.
'ಜನ್ ಮಹಲ್' ಎಂಬ ಯೂಟ್ಯೂಬ್ ವಾಹಿನಿ ನಡೆಸುತ್ತಿರುವ ಜಸ್ಬೀರ್ ಸಿಂಗ್ ಅವರ ಚಾನೆಲ್ ಗೆ ಒಂದು ಮಿಲಿಯನ್ (ದಶಲಕ್ಷ) ಗೂ ಅಧಿಕ ಮಂದಿ ಚಂದಾದಾರರನ್ನು ಹೊಂದಿದ್ದಾರೆ. ಆತನನ್ನು ರೂಪಾನಗರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ಅಧಿಕಾರಿ ಶಕೀರ್‌ನೊಂದಿಗೆ ಸಂಪರ್ಕ ಹೊಂದಿದ್ದ ಜಸ್ಬೀರ್ ಸಿಂಗ್, ದಿಲ್ಲಿಯಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ನಡೆದಿದ್ದ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲೂ ಪಾಲ್ಗೊಂಡಿದ್ದ ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ, ಮೇ 15ರಂದು ಬೇಹುಗಾರಿಕೆಯ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಹರ್ಯಾಣದಲ್ಲಿ ಬಂಧನಕ್ಕೊಳಗಾಗಿದ್ದ ಜ್ಯೋತಿ ಮಲ್ಹೋತ್ರಾಳೊಂದಿಗೂ ಜಸ್ಬೀರ್ ಸಿಂಗ್ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.