×
Ad

ದೇಶಾದ್ಯಂತ ಐಫೋನ್ 15 ಬಿಡುಗಡೆ: ಮುಂಬೈ, ದಿಲ್ಲಿ ಆ್ಯಪಲ್ ಮಳಿಗೆಗಳ ಮುಂದೆ ಖರೀದಿಗೆ ಮುಗಿಬಿದ್ದ ಗ್ರಾಹಕರು

Update: 2023-09-22 15:20 IST
Screengrab: Twitter/@ANI

ಮುಂಬೈ: ಐಫೋನ್ 15 ಸ್ಮಾರ್ಟ್ ಫೋನ್ ಗಳು ಇಂದಿನಿಂದ ದೇಶಾದ್ಯಂತ ಲಭ್ಯವಾಗಲಿದ್ದು, ಮುಂಬೈ ನಿವಾಸಿಗಳು ನೂತನವಾಗಿ ಬಿಡುಗಡೆಯಾಗಿರುವ ಐಫೋನ್ 15 ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮುಂಬೈನ ಬಿಕೆಸಿ ಪ್ರದೇಶದಲ್ಲಿರುವ ಭಾರತದ ಮೊಟ್ಟಮೊದಲ ಆ್ಯಪಲ್ ಮಳಿಗೆಯ ಮುಂದೆ ಐಫೋನ್ 15 ಖರೀದಿಸಲು ಇಂದು ಬೆಳಗ್ಗೆಯಿಂದಲೇ ಗ್ರಾಹಕರ ಉದ್ದನೆಯ ಸರತಿ ಸಾಲು ಕಂಡು ಬಂದಿದೆ ಎಂದು ವರದಿಯಾಗಿದೆ.

ಈ ಕುರಿತು ಕಾಣಿಸಿಕೊಂಡಿರುವ ದೃಶ್ಯಾವಳಿಗಳಲ್ಲಿ ಐಫೋನ್ 15 ಸ್ಮಾರ್ಟ್ ಫೋನ್ ನ ಮೊದಲ ದಿನದ ಖರೀದಿ ಮಾಡಲು ಆ್ಯಪಲ್ ಮಳಿಗೆಯ ಮುಂದೆ ದೊಡ್ಡ ಜನಜಂಗುಳಿ ಕಂಡು ಬಂದಿದ್ದು, ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮಳಿಗೆ ಪ್ರವೇಶಿಸಲು ಕಾಯುತ್ತಿರುವುದು ಸೆರೆಯಾಗಿದೆ.

ಮುಂಬೈನ ಬಿಕೆಸಿ ಪ್ರದೇಶದಲ್ಲಿರುವ ಆ್ಯಪಲ್ ಮಳಿಗೆಯ ಮುಂದೆ ನಿಂತಿದ್ದ ಗ್ರಾಹಕರೊಬ್ಬರು, “ನಾನು ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದ ಇಲ್ಲಿ ನಿಂತಿದ್ದೇನೆ. ನಾನು ಭಾರತದ ಮೊಟ್ಟಮೊದಲ ಐಫೋನ್ ಮಳಿಗೆಯಿಂದ ಮೊದಲ ಐಫೋನ್ ಖರೀದಿಸಲು 17 ಗಂಟೆಯಿಂದ ಸರತಿ ಸಾಲಿನಲ್ಲಿ ಕಾಯುತ್ತಿದ್ದೇನೆ. ನಾನಿಲ್ಲಿಗೆ ಅಹಮದಾಬಾದ್ ನಿಂದ ಬಂದಿದ್ದೇನೆ” ಎಂದು ತಿಳಿಸಿದ್ದಾರೆ.

ಬೆಂಗಳೂರಿನ ವಿವೇಕ್ ಎಂಬ ಮತ್ತೊಬ್ಬ ಗ್ರಾಹಕರು, “ನಾನು ನನ್ನ ಐಫೋನ್ 15 ಪ್ರೊ ಸ್ಮಾರ್ಟ್ ಫೋನ್ ಖರೀದಿಸುತ್ತಿರುವುದಕ್ಕೆ ಖುಷಿಯಾಗಿದೆ. ನಾನು ತುಂಬಾ ರೋಮಾಂಚಿತನಾಗಿದ್ದೇನೆ” ಎಂದು ಹೇಳಿದ್ದಾರೆ.

ದಿಲ್ಲಿಯ ಸಾಕೇತ್ ನಲ್ಲಿನ ಸೆಲೆಕ್ಟ್ ಸಿಟಿವಾಕ್ ಮಾಲ್ ಬಳಿ ಇರುವ ಭಾರತದ ಎರಡನೆ ಆ್ಯಪಲ್ ಮಳಿಗೆ ಎದುರಿಗೂ ಇಂತಹುದೇ ದೃಶ್ಯಾವಳಿಗಳು ಕಂಡು ಬಂದಿವೆ.

ಐಫೋನ್ 15 ಸ್ಮಾರ್ಟ್ ಫೋನ್ 6.1 ಇಂಚು ಸ್ಕ್ರೀನ್ ಹೊಂದಿದ್ದರೆ, ಐಫೋನ್ 15 ಪ್ಲಸ್ 6.7 ಇಂಚು ಸ್ಕ್ರೀನ್ ಹೊಂದಿದೆ. ಈ ಎರಡೂ ಆವೃತ್ತಿಗಳು ಗುಲಾಬಿ, ಹಳದಿ, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿವೆ. ಈ ಸ್ಮಾರ್ಟ್ ಫೋನ್ ಗಳ ಮೂಲಬೆಲೆಯು ಕ್ರಮವಾಗಿ ರೂ. 79,900ರಿಂದ ರೂ. 89,900 ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News