ರಾಮಮಂದಿರ ಯಾತ್ರೆಯ ಸಂದರ್ಭದಲ್ಲಿ ಉಂಟಾದ ಚಕಮಕಿಯ ನಂತರ ಮುಸ್ಲಿಮರ ಬಂಧನ
Photo: the wire
ಮೆಹ್ಸಾನಾ: ಉತ್ತರ ಗುಜರಾತ್ ನ ಮೆಹ್ಸಾನಾ ಜಿಲ್ಲೆಯ ಖೆರಾಲುನಲ್ಲಿರುವ ಮುಸ್ಲಿಂ ಬಾಹುಳ್ಯದ ಪ್ರದೇಶ ಬೆಲಿಮ್ ವಾಸ್. ಈ ಗ್ರಾಮದ ಜನರು ತಮ್ಮ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಪೊಲೀಸ್ ಅಧಿಕಾರಿಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾ, ತಮ್ಮ ಚಲನವಲನಗಳನ್ನು ಸೀಮಿತಗೊಳಿಸಿಕೊಂಡಿದ್ದಾರೆ.
ಅಯೋಧ‍್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿದ ಹಿಂದಿನ ದಿನ ಜನವರಿ 21ರಂದು ಹಿಂದೂ ನಿವಾಸಿಗಳು ಶೋಭಾ ಯಾತ್ರೆಯನ್ನು ನಡೆಸಿದ್ದರು. ಈ ಯಾತ್ರೆಯಲ್ಲಿ ಕನಿಷ್ಠ ಪಕ್ಷ 600-700 ಮಂದಿ ಭಾಗವಹಿಸಿದ್ದರು ಎಂದು ಸ್ಥಳೀಯರು ಅಂದಾಜಿಸಿದ್ದಾರೆ.
ಆದರೆ, ಈ ಯಾತ್ರೆಯು ತನ್ನ ಪೂರ್ವನಿರ್ಧರಿತ ಮಾರ್ಗವನ್ನು ಬದಲಿಸಿ ಆ ಪ್ರದೇಶದಲ್ಲಿರುವ ಮಸೀದಿಯ ಮಾರ್ಗದ ಮೂಲಕ ಹಾದು ಹೋಯಿತು ಎನ್ನುತ್ತಾರೆ ಸ್ಥಳೀಯರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರಿಗೆ ದೊಡ್ಡ ಸದ್ದಿನ ಸಂಗೀತ ನುಡಿಸದಂತೆ ಹಾಗೂ ಮಸೀದಿಯ ಎದುರು ಪಟಾಕಿಗಳನ್ನು ಸಿಡಿಸದಂತೆ ಸ್ಥಳೀಯ ಮುಸ್ಲಿಮರು ಮನವಿ ಮಾಡಿದ್ದಾರೆ. ಆದರೆ, ಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಆ ಮನವಿಗಳನ್ನು ನಿರ್ಲಕ್ಷಿಸಿದರು ಎನ್ನುತ್ತಾರೆ ಸ್ಥಳೀಯರು.
ಇದರಿಂದ ಉಭಯ ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದು, ನಂತರ ಹಿಂಸಾಚಾರಕ್ಕೆ ತಿರುಗಿದೆ. ಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಈ ಸಂದರ್ಭದಲ್ಲಿ ಕತ್ತಿ, ದೊಣ್ಣೆಗಳು ಹಾಗೂ ಕಲ್ಲುಗಳನ್ನು ಬಳಸಿದರು ಎಂದು ಸ್ಥಳೀಯರು ಹೇಳುತ್ತಾರೆ. ಈ ಸಂಗತಿಯು ವಿಡಿಯೊದಲ್ಲಿ ಕೂಡಾ ದಾಖಲಾಗಿದೆ.
ಮುಸ್ಲಿಮರ ಬಂಧನ, ವಶ
ಹಿಂಸಾಚಾರವು ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೆ ಮೆಹ್ಸಾನಾ ಪೊಲೀಸರು ಅಶ‍್ರುವಾಯುವನ್ನು ಬಳಸಿ ಗುಂಪನ್ನು ಚದುರಿಸಿದ್ದಾರೆ. ಪೊಲೀಸರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಹಾಗೂ ದೈಹಿಕವಾಗಿ ಥಳಿಸಿದರು ಎಂದು ಬೆಲಿಮ್ ವಾಸ್ ನಿವಾಸಿಗಳು ಆರೋಪಿಸುತ್ತಾರೆ.
ಇದರೊಂದಿಗೆ ಪೊಲೀಸರು 13 ವಯಸ್ಕ ಪುರುಷರು ಹಾಗೂ ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದು, ಇವರೆಲ್ಲರೂ ಬೆಲಿಮ್ ವಾಸ್ ನಿವಾಸಿಗಳು ಹಾಗೂ ಮುಸ್ಲಿಮರು.
ತಮಗೆ ಶಿಕ್ಷೆ ವಿಧಿಸಲು ತಮ್ಮ ನಿವಾಸಗಳಿಗೆ ಅತಿಕ್ರಮಣ ಪ್ರವೇಶ ಮಾಡಿದ ಪೊಲೀಸರು, ತಮ್ಮ ಮನೆಯ ಬಾಗಿಲುಗಳು ಹಾಗೂ ಕಾರುಗಳನ್ನು ಧ್ವಂಸಗೊಳಿಸಿದರು ಎಂದು ಮುಸ್ಲಿಂ ಮಹಿಳೆಯರು ಆರೋಪಿಸಿದ್ದಾರೆ.
ಮುಹಮ್ಮದ್ ಹುಸೈನ್ ಎಂಬ ಬಂಧನಕ್ಕೊಳಗಾಗಿರುವ ವ್ಯಕ್ತಿಯ ಪತ್ನಿ ರುಬೀನಾ ಹೇಳುವ ಪ್ರಕಾರ, ಹಿಂಸಾಚಾರದ ಬೆನ್ನಿಗೇ ತನ್ನ ಪತಿಯನ್ನು ಪೊಲೀಸರು ಕರೆದೊಯ್ದರು. ಮನೆಯಿಂದ ಹೊರಗೆಳೆದುಕೊಂಡು ಹೋಗುವಾಗ ಅವರನ್ನು ತೀವ್ರವಾಗಿ ಥಳಿಸಿದರು. ಮನೆಯ ದ್ವಾರಗಳು, ಬಾಗಿಲುಗಳನ್ನು ಒಡೆದು ಹಾಕಿದರು ಹಾಗೂ ಮನೆಯಲ್ಲಿದ್ದ ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿದರು. ಇದನ್ನು ಮಹಿಳೆಯರು ಪ್ರತಿಭಟಿಸಿದಾಗ, ಅವರನ್ನೂ ಬಂಧಿಸುವ ಬೆದರಿಕೆ ಒಡ್ಡಿದರು ಎಂದು ಹೇಳಿದ್ದಾರೆ.
ರುಬೀನಾರ ಪತಿಯನ್ನು ಇನ್ನಿತರ 12 ಮಂದಿ ಮುಸ್ಲಿಮರೊಂದಿಗೆ ಮೆಹ್ಸಾನಾದ ವಸಾಯಿ ಜೈಲಿನಲ್ಲಿಡಲಾಗಿದೆ. ಹುಸೈನ್ ಖಿನ್ನತೆಯ ರೋಗಿಯಾಗಿದ್ದು, ಸದ್ಯ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಲಿನಲ್ಲಿ ಅವರಿಗೆ ಈ ವೈದ್ಯಕೀಯ ನೆರವು ದೊರೆಯುವುದಿಲ್ಲ. ರುಬೀನಾರ ನೋವು ನೆರೆಯ ಮುಹಮ್ಮದ್ ಸಿದ್ದೀಕ್ ಮನೆಯಲ್ಲೂ ಕಂಡು ಬರುತ್ತಿದೆ. ಸಿದ್ದೀಕ್ ನಿರ್ಭಾವುಕ ಮುಖ ಪ್ರದರ್ಶಿಸುತ್ತಿದ್ದಾರೆ. ಅವರ 16 ವರ್ಷದ ಪುತ್ರ ರೆಹ್ಮತುಲ್ಲಾ ಬಂಧನವಾಗಿ ಇಂದಿಗೆ ಐದು ದಿನಗಳಾಗಿವೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಹ್ಮತುಲ್ಲಾರನ್ನು ಕರೆದೊಯ್ದಿದ್ದಾರೆ.
“ನಮ್ಮ ಬಂಧಿತ ಸಂಬಂಧಿಗಳನ್ನು ಎಲ್ಲಿಗೆ ಕರೆಯದೊಯ್ಯಲಾಗಿದೆ ಎಂದು ಅವರು ನಮಗೆ ತಿಳಿಸಿಲ್ಲ. ಇಂದಿಗೆ ಐದು ದಿನಗಳಾಗಿದ್ದು, ಪ್ರಕರಣ ಮುಕ್ತಾಯವಾಗುವವರೆಗೂ ಆತನನ್ನು ಬಾಲಾಪರಾಧ ಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ” ಎನ್ನುತ್ತಾರೆ ಸಿದ್ದೀಕ್.
ಯೋಜಿತ, ಪ್ರಚೋದನಾಕಾರಿ ಮೆರವಣಿಗೆ
ಈ ಹಿಂದೆ ಶಾಂತಿಯುತವಾಗಿದ್ದ ಖೆರಾಲು ನೆರೆಪ್ರದೇಶವು ಹೇಗೆ ಇಂತಹ ಗುರಿಯಾಗಿಸಿಕೊಂಡ ಕ್ರಮಕ್ಕೆ ಸಾಕ್ಷಿಯಾಯಿತು ಎಂಬ ಬಗ್ಗೆ ಈ ಪ್ರದೇಶದ ಮಾಜಿ ಕಾರ್ಪೊರೇಟರ್ ಝುಬೇರ್ ಬೆಲಿಮ್ ದಿಗ್ಭ್ರಮೆ ವ್ಯಕ್ತಪಡಿಸುತ್ತಾರೆ.
“ಮುಸ್ಲಿಮರು ಇಲ್ಲಿ ಅಲ್ಪಸಂಖ್ಯಾತರಾಗಿದ್ದರೂ, ನಾವು ಇಲ್ಲಿ ಅಸುರಕ್ಷತೆಯನ್ನು ಅನುಭವಿಸಿರಲಿಲ್ಲ. ಪರಿಸ್ಥಿತಿಯು ಬದಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ನಡೆದಿರುವ ಹಿಂದೂ ಮೆರವಣಿಗೆಗಳು ಸಾಕಷ್ಟು ಬದಲಾವಣೆ ಕಂಡಿವೆ. ಅವರ ಬಳಿ ಕತ್ತಿ, ಸಲಾಕೆಗಳಿದ್ದವು ಹಾಗೂ ಅವರು ಕಲ್ಲು ತೂರಾಟ ನಡೆಸಿದರು. ಅವರು ನನ್ನ ನಿವಾಸದಲ್ಲಿನ ಟಿವಿಯನ್ನು ಧ್ವಂಸಗೈದರು. ಅವರು ಸಮೀಪದ ಉಪಾಹಾರ ಗೃಹಕ್ಕೆ ಬೆಂಕಿ ಹಚ್ಚಿದರು. ಇದು ತೀರಾ ಅಪಾಯಕಾರಿ. ಮಂದಿರ ನಿರ್ಮಾಣವನ್ನು ಸಂಭ್ರಮಿಸುವ ಯಾತ್ರೆಯನ್ನು ನಾವು ನಿರೀಕ್ಷಿಸಿದ್ದೆವು. ಆದರೆ, ನಾವು ಈ ರೀತಿ ಗುರಿಯಾಗುತ್ತೇವೆ ಎಂದು ನಿರೀಕ್ಷಿಸಿರಲಿಲ್ಲ” ಎನ್ನುತ್ತಾರೆ ಝುಬೇರ್ ಬೆಲಿಮ್.
ಶಸ್ತ್ರಸಜ್ಜಿತ ಮತ್ತು ಕುಪಿತರಾಗಿದ್ದರು
ಬೆಲಿಮ್ ವಾಸ್ ನಿವಾಸಿಗಳಾದ ಮಹಿಳೆಯರು, ಪುರುಷರು ಹಾಗೂ ಯುವಕರು ರಾಮಮಂದಿರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದವರು ಕತ್ತಿಗಳು ಹಾಗೂ ಸಲಾಕೆಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
“ಅವರು ನನ್ನ ಟೀ ಅಂಗಡಿಗೆ ಬೆಂಕಿ ಇಟ್ಟರು ಹಾಗೂ ಹಿಂದೂ ಮಾಲಕತ್ವವಿರುವ, ಮುಸ್ಲಿಂ ವ್ಯಕ್ತಿ ನಡೆಸುತ್ತಿರುವ ಅಂಬಿಕಾ ಹೋಟೆಲ್ ಅನ್ನು ಸುಟ್ಟು ಹಾಕಿದರು. ಅವರು ತಮ್ಮ ಉಪಸ್ಥಿತಿಯಿಂದ ನಮ್ಮಲ್ಲಿ ಭೀತಿ ಹುಟ್ಟಿಸಿ, ನಮಗೆ ಹಾನಿಯುಂಟು ಮಾಡಲು ಮಾರ್ಗ ಬದಲಾವಣೆ ಮಾಡಿದ್ದರು. ಹೀಗಿದ್ದೂ ನಮ್ಮ ಮಕ್ಕಳು ಹಾಗೂ ಸಹೋದರರನ್ನು ಪ್ರಾಥಮಿಕ ಮಾಹಿತಿ ವರದಿಯಲ್ಲಿ ಮೊದಲಿಗೆ ನಮೂದಿಸಲಾಗಿದೆ” ಎಂದು ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಗುಜರಾತ್ ರಾಜ್ಯದಾದ್ಯಂತ ಹಲವಾರು ನೆರೆಹೊರೆಯವರು ಮೆರವಣಿಗೆಯು ಹಿಂಸಾಚಾರಕ್ಕೆ ತಿರುಗಿರುವುದಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹ ಬಹುತೇಕ ರಾಮಮಂದಿರ ಮೆರವಣಿಗೆಗಳನ್ನು ಪೊಲೀಸರ ಅನುಮತಿ ಇಲ್ಲದೆ ನಡೆಸಲಾಗಿದೆ. ಅಹಮದಾಬಾದ್ ನ ಜುಹುಪುರ, ಡೆಹ್ಗಮ್ ನ ಕರೋಲಿ, ಆನಂದ್ ನ ಭಾಜಿಪುರದಲ್ಲೂ ಮೆರವಣಿಗೆಗಳು ನಡೆದಿದ್ದು, ಜನವರಿ 22ರಂದು ನಡೆಯಲಿದ್ದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಜನರನ್ನು ಪ್ರಚೋದಿಸಲು ಯತ್ನಿಸಿರುವುದು ಕಂಡು ಬಂದಿದೆ.
ಸೌಜನ್ಯ: thewire.in