ಕಲಾ ಇತಿಹಾಸ ತಜ್ಞ ಬಿ.ಎನ್.ಗೋಸ್ವಾಮಿ ನಿಧನ
ಬಿ.ಎನ್.ಗೋಸ್ವಾಮಿ | Photo: indianexpress.com
ಹೊಸದಿಲ್ಲಿ : ಖ್ಯಾತ ಕಲಾ ಇತಿಹಾಸ ತಜ್ಞ ಹಾಗೂ ಬರಹಗಾರ ಬಿ.ಎನ್.ಗೋಸ್ವಾಮಿ ಅವರು ಶುಕ್ರವಾರ ನಿಧನರಾಗಿದ್ದಾರೆ. 90 ವರ್ಷ ವಯಸ್ಸಿನ ಗೋಸ್ವಾಮಿ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ (ಪಿಜಿಐಎಂಇಆರ್) ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರೆಂದು ಅವರ ಕುಟುಂಬ ಸ್ನೇಹಿತ ಹಾಗೂ ರಂಗಭೂಮಿ ಕಲಾವಿದ ನೀಲಂ ಮನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
1933ರ ಆಗಸ್ಟ್ 15ರಂದು ಜನಿಸಿದ ಬಿ.ಎನ್.ಗೋಸ್ವಾಮಿ ಅವರು ಪದ್ಮಶ್ರೀ ಹಾಗೂ ಪದ್ಮಭೂಷಣ ಪುರಸ್ಕೃತರಾದ ಅವರು ಪಹಾರಿ ಶೈಲಿಯ ಚಿತ್ರಕಲಾಕೃತಿಗಳಿಗಾಗಿ ಪ್ರಸಿದ್ಧರಾಗಿದ್ದರು.
ಕಲಾ ವಲಯಗಳಲ್ಲಿ ಬಿಎನ್ಐ ಎಂದೇ ಚಿರಪರಿಚಿತರಾಗಿದ್ದ ಗೋಸ್ವಾಮಿ ಅವರು ಪಹಾರಿ ಪೇಂಟಿಗ್, ಮಿನಿಯೇಚರ್ ಪೇಂಟಿಂಗ್, ಆಸ್ಥಾನ ಚಿತ್ರಕಲಾವಿದರು ಹಾಗೂ ಪ್ರಮುಖ ಭಾರತೀಯ ಚಿತ್ರಕಲಾವಿದರ ಕುರಿತು 26 ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ.
ಪಂಜಾಬ್ ವಿಶ್ವವಿದ್ಯಾನಿಲಯದ ಕಲಾ ಇತಿಹಾಸದ ಪ್ರೊಫೆಸರ್ ಆಗಿದ್ದ ಗೋಸ್ವಾಮಿ ಅವರು ತಮ್ಮ ಕಲಾಕೃತಿಗಳಲ್ಲಿ ಅತ್ಯುತ್ತಮವಾಗಿ ಅಭಿವ್ಯಕ್ತಗೊಳಿಸುತ್ತಿದ್ದರು. ಅಲ್ಲದೆ ಅವರೊಬ್ಬ ಶ್ರೇಷ್ಠ ಶ್ರೋತೃವೂ ಆಗಿದ್ದರು ಎಂದು ಸಿಂಗ್ ಹೇಳಿದ್ದಾರೆ.
ಗೋಸ್ವಾಮಿ ಅವರು ಪತ್ನಿ ಕರುಣಾ ಕೂಡಾ ಕಲಾ ಇತಿಹಾಸತಜ್ಞರಾಗಿದ್ದು ಅವರು 2020ರಲ್ಲಿ ನಿಧನರಾಗಿದ್ದರು. ಅವರು ತನ್ನ ಏಕೈಕ ಪುತ್ರಿ ಮಾಳವಿಕಾ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.