×
Ad

ಅರುಂಧತಿ ರಾಯ್, ನೂರಾನಿ ಸೇರಿದಂತೆ ಖ್ಯಾತ ಲೇಖಕರ ʼಕಾಶ್ಮೀರʼದ ಕುರಿತ 25 ಪುಸ್ತಕಗಳನ್ನು ನಿಷೇಧಿಸಿದ ಜಮ್ಮುಕಾಶ್ಮೀರ ಸರಕಾರ

Update: 2025-08-07 11:44 IST

ಅರುಂಧತಿ ರಾಯ್ (Photo: PTI)

ಶ್ರೀನಗರ : ಜಮ್ಮುಕಾಶ್ಮೀರ ಗೃಹ ಇಲಾಖೆಯು ಅರುಂಧತಿ ರಾಯ್, ಎ ಜಿ ನೂರಾನಿ ಸೇರಿದಂತೆ ಖ್ಯಾತ ಲೇಖಕರ ಕಾಶ್ಮೀರದ ಕುರಿತ 25 ಪುಸ್ತಕಗಳನ್ನು ನಿಷೇಧಿಸಿದೆ. ಅವುಗಳು ಪ್ರತ್ಯೇಕತಾವಾದವನ್ನು ಪ್ರಚಾರ ಮಾಡುತ್ತದೆ ಎಂದು ಹೇಳಿದೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಆದೇಶದ ಮೇರೆಗೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಚಂದ್ರಕರ್ ಭಾರ್ತಿ ಅವರು ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಈ ಪುಸ್ತಕಗಳ ಪ್ರತಿಗಳು, ಅಥವಾ ಇತರ ದಾಖಲೆಗಳನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023ರ ಸೆಕ್ಷನ್ 98ರ ಪ್ರಕಾರ 'ಜಪ್ತಿ' ಮಾಡಿಕೊಳ್ಳಬೇಕು ಎಂದು ಸೂಚಿಸಿದೆ.

ಕೆಲವು ಸಾಹಿತ್ಯಗಳು ಜಮ್ಮುಕಾಶ್ಮೀರದಲ್ಲಿ ತಪ್ಪು ಮಾಹಿತಿ ಮತ್ತು ಪ್ರತ್ಯೇಕತಾವಾದವನ್ನು ಪ್ರಚಾರ ಮಾಡುತ್ತವೆ ಎಂಬುದು ಸರಕಾರದ ಗಮನಕ್ಕೆ ಬಂದಿದೆ. ಈ ಸಾಹಿತ್ಯವು ಯುವಕರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಯುವಕರಲ್ಲಿ ಅಸಮಾಧಾನ, ಬಲಿಪಶು ಭಾವನೆ, ಭಯೋತ್ಪಾದಕರನ್ನು ಹೀರೊಗಳಂತೆ ನೋಡುವ ಭಾವನೆ ಬೆಳೆದು ಬರುವ ಅಪಾಯವಿದೆ ಎಂದು ಹೇಳಿದೆ.

ಐತಿಹಾಸಿಕ ಸಂಗತಿಗಳನ್ನು ವಿರೂಪಗೊಳಿಸುವುದು, ಭಯೋತ್ಪಾದಕರನ್ನು ವೈಭವೀಕರಣ ಮಾಡುವುದು, ಭದ್ರತಾ ಪಡೆಗಳನ್ನು ದೂಷಣೆ ಮಾಡುವುದು, ಧಾರ್ಮಿಕ ಆಮೂಲಾಗ್ರೀಕರಣ, ಪರಕೀಯತೆಯ ಪ್ರಚಾರ, ಹಿಂಸೆ ಮತ್ತು ಭಯೋತ್ಪಾದನೆಗೆ ಉತ್ತೇಜನ ನೀಡುವುದು ಇತ್ಯಾದಿಗಳ ಮೂಲಕ ಈ ಸಾಹಿತ್ಯ ಜಮ್ಮುಕಾಶ್ಮೀರದಲ್ಲಿ ಯುವಕರ ಆಮೂಲಾಗ್ರೀಕರಣಕ್ಕೆ ಕೊಡುಗೆ ನೀಡುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಪುಸ್ತಕಗಳಲ್ಲಿ ಪ್ರಸಿದ್ಧ ಸಾಂವಿಧಾನಿಕ ತಜ್ಞ ನೂರಾನಿಯವರ 'ದಿ ಕಾಶ್ಮೀರ್ ಡಿಸ್ಪ್ಯೂಟ್ 1947-2012', ಸುಮಂತ್ರ ಬೋಸ್ ಅವರ 'ಕಾಶ್ಮೀರ್ ಅಟ್ ದಿ ಕ್ರಾಸ್ರೋಡ್ಸ್ ಅಂಡ್ ಕಾಂಟೆಸ್ಟೆಡ್ ಲ್ಯಾಂಡ್ಸ್', ಡೇವಿಡ್ ದೇವದಾಸ್ ಅವರ 'ಇನ್ ಸರ್ಚ್ ಆಫ್ ಎ ಫ್ಯೂಚರ್: ದಿ ಕಾಶ್ಮೀರ್ ಸ್ಟೋರಿ', ಪತ್ರಕರ್ತೆ ಅನುರಾಧಾ ಭಾಸಿನ್ ಅವರ 'ರಾಯಸ್‌ ಆಝಾದಿ ಮತ್ತು ಎ ಡಿಸ್ಮ್ಯಾಂಟಲ್ಡ್ ಸ್ಟೇಟ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ್ ಆಫ್ಟರ್ ಆರ್ಟಿಕಲ್ 370' ಮುಂತಾದ ಪುಸ್ತಕಗಳು ಸೇರಿವೆ.

ನಿಷೇಧಿತ ಅಂತಾರಾಷ್ಟ್ರೀಯ ಪುಸ್ತಕಗಳಲ್ಲಿ ಕಾಶ್ಮೀರಿ ಅಮೆರಿಕದ ಲೇಖಕಿ ಹಫ್ಸಾ ಕಾಂಜ್ವಾಲ್ ಅವರ 'ಕಾಲೋನೈಸಿಂಗ್ ಕಾಶ್ಮೀರ್: ಸ್ಟೇಟ್ ಬಿಲ್ಡಿಂಗ್ ಅಂಡರ್ ಇಂಡಿಯನ್ ಆಕ್ಯುಪೇಶನ್', ಹ್ಯಾಲಿ ಡಶಿನ್ಸ್ಕಿ ಅವರ 'ರೆಸಿಟಿಂಗ್ ಆಕ್ಯುಪೇಶನ್ ಇನ್ ಕಾಶ್ಮೀರ್', ವಿಕ್ಟೋರಿಯಾ ಸ್ಕೋಫೀಲ್ಡ್ ಅವರ 'ಕಾಶ್ಮೀರ್ ಇನ್ ಕಾನ್ಫ್ಲಿಕ್ಟ್' ಮತ್ತು ಕ್ರಿಸ್ಟೋಫರ್ ಸ್ನೆಡೆನ್ ಅವರ 'ಇಂಡಿಪೆಂಡೆಂಟ್ ಕಾಶ್ಮೀರ್' ಪುಸ್ತಕಗಳು ಸೇರಿವೆ.

ಸೀಮಾ ಕಾಝಿಯವರ ʼಬಿಟ್ವೀನ್ ಡೆಮಾಕ್ರಸಿ & ನೇಷನ್: ಜೆಂಡರ್ ಅಂಡ್ ಮಿಲಿಟರೈಸೇಶನ್ ಇನ್ ಕಾಶ್ಮೀರ್ʼ, ಎಸ್ಸಾರ್ ಬಟೂಲ್ ಅವರ ʼಡು ಯು ರಿಮೆಂಬರ್ ಕುನಾನ್ ಪೋಶ್ಪೋರಾ?ʼ ಮತ್ತು ಅಥರ್ ಝಿಯಾ ಅವರ ʼರೆಸಿಟಿಂಗ್ ಡಿಸಪಿಯರೆನ್ಸ್: ಮಿಲಿಟರಿ ಆಕ್ಯುಪೇಶನ್ ಅಂಡ್ ವುಮೆನ್ಸ್ ಆಕ್ಟಿವಿಸಂ ಇನ್ ಕಾಶ್ಮೀರ್ʼ ಕೃತಿಗಳು ಸೇರಿದಂತೆ 25 ಪುಸ್ತಕಗಳನ್ನು ನಿಷೇಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News