×
Ad

ಹರ್ಯಾಣ | ಸಂದೀಪ್ ಲಾಥರ್ ಆತ್ಮಹತ್ಯೆಗೆ ಮೊದಲು ನಮ್ಮನ್ನು ಭೇಟಿಯಾಗಿದ್ದ ಎಂದ ಸ್ನೇಹಿತ; ಎಎಸ್ಐ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

Update: 2025-10-16 17:46 IST

 ವೈ.ಪೂರಣ್ ಕುಮಾರ್(NDTV) , ಸಂದೀಪ್ ಕುಮಾರ್ ಲಾಥರ್ (X)

ರೋಹ್ಟಕ್ : ಹರ್ಯಾಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಎಎಸ್ಐ ಸಂದೀಪ್ ಕುಮಾರ್ ಲಾಥರ್ ಆತ್ಮಹತ್ಯೆಗೆ ಕೆಲವೇ ಗಂಟೆಗಳ ಮೊದಲು ಬೈಪಾಸ್ ಬಳಿ ಚಹಾ ಅಂಗಡಿಯಲ್ಲಿ ನಮ್ಮನ್ನು ಭೇಟಿಯಾಗಿದ್ದರು. ಅವರಿಗೆ ಪೋನ್ ಕರೆಯೊಂದು ಬಂದ ಬಳಿಕ ಕಚೇರಿಗೆ ತೆರಳುವುದಾಗಿ ಹೇಳಿ ಹೋಗಿದ್ದಾರೆ ಎಂದು ಅವರ ಸ್ನೇಹಿತ ತಿಳಿಸಿದ್ದಾರೆ.

ಜಿಂದ್ ಜಿಲ್ಲೆಯ ಜುಲಾನಾ ನಿವಾಸಿಯಾಗಿರುವ ಎಎಸ್ಐ ಸಂದೀಪ್ ಲಾಥೇರ್ ಮಂಗಳವಾರ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮೊದಲು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಐಪಿಎಸ್ ಅಧಿಕಾರಿ ವೈ.ಪೂರಣ್ ಕುಮಾರ್ ಭ್ರಷ್ಟ ಅಧಿಕಾರಿಯಾಗಿದ್ದರು ಎಂದು ಅವರು ಆರೋಪಿಸಿದ್ದರು.

“ಅವನು ಸುಳ್ಳು ಹೇಳಿದನು. ಆ ದಿನ ಸಂದೀಪ್ ಗೊಂದಲ ಮತ್ತು ಯೋಚನೆಯಲ್ಲಿದ್ದಂತೆ ಇದ್ದ ಎಂದು ಅವರ ಸ್ನೇಹಿತ ಸಂಜಯ್ ದೇಸ್ವಾಲ್ indianexpress.comಗೆ ತಮ್ಮ ಕೊನೆಯ ಭೇಟಿಯ ಬಗ್ಗೆ ವಿವರಿಸುತ್ತಾ ಹೇಳಿದರು.

“ಸಂದೀಪ್ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕರೆ ಮಾಡಿ ಭೇಟಿಯಾಗೋಣ ಎಂದು ಹೇಳಿದ. ನಾವು ಬೆಳಿಗ್ಗೆ 11.30ರ ಸುಮಾರಿಗೆ ಬೈಪಾಸ್ ಬಳಿಯ ಟೀ ಸ್ಟಾಲ್‌ನಲ್ಲಿ ಭೇಟಿಯಾದೆವು. ಐಜಿಪಿ ಪೂರಣ್ ಕುಮಾರ್ ಅವರ ಆತ್ಮಹತ್ಯೆ ತನಿಖೆಯ ಬಗ್ಗೆ ನಮ್ಮ ಮಧ್ಯೆ ಚರ್ಚೆ ನಡೆದಿದೆ. ಮಾತನಾಡುತ್ತಿದ್ದ ವೇಳೆ ಸಂದೀಪ್‌ಗೆ ಫೋನ್ ಕರೆ ಬಂತು. ನಂತರ ಕಚೇರಿಗೆ ಹೋಗುವುದಾಗಿ ಹೇಳಿ ಸಂದೀಪ್ ಹೋಗಿದ್ದಾನೆ. ನಾವು ಅವನು ಸೈಬರ್ ಸೆಲ್ ಕಚೇರಿಗೆ ಹೋಗುತ್ತಿದ್ದಾನೆ ಎಂದು ಭಾವಿಸಿದೆವು. ಆದರೆ ಇದಾದ ಒಂದೇ ಗಂಟೆಯಲ್ಲಿ ಸಂದೀಪ್ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನಮಗೆ ತಿಳಿಯಿತು” ಎಂದು ಸಂಜಯ್ ದೇಸ್ವಾಲ್ ಹೇಳಿದರು.

ಐಜಿಪಿ ಪೂರಣ್ ಕುಮಾರ್ ಅವರ ಆತ್ಮಹತ್ಯೆಯ ಬಗ್ಗೆ ಸಂದೀಪ್ ಇದಕ್ಕಿಂತ ಮೊದಲು ಕೂಡ ನನ್ನಲ್ಲಿ ಮಾತನಾಡಿದ್ದ. ಶನಿವಾರ ಸಂಜೆ ನನಗೆ ಕರೆ ಮಾಡಿ ಐಜಿಪಿ ಪೂರಣ್ ಕುಮಾರ್ ಆತ್ಮಹತ್ಯೆ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾನೆ. ನಾನು ಭೇಟಿಯಾಗಿ ಮಾತನಾಡುವ ಎಂದು ಹೇಳಿದೆ. ಅದರಂತೆ ರವಿವಾರ ನಾವು ಭೇಟಿಯಾಗಿ ಮಾತನಾಡಿದೆವು. ಈ ವಿಚಾರದಲ್ಲಿ ನಿಜವಾಗಿರುವುದು ಬೇರೆಯೇ ಇದೆ. ಆದರೆ ಸಂಪೂರ್ಣವಾಗಿ ವಿರುದ್ಧವಾಗಿ ಬಿಂಬಿಸಲಾಗುತ್ತಿದೆ ಎಂದು ನನಗೆ ತಿಳಿಸಿದ್ದ ಎಂದು ಸಂಜಯ್ ದೇಸ್ವಾಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News