ಮೂತ್ರಪಿಂಡ ದಾನ ಪ್ರಕರಣ |ಅಂತರ್ಧರ್ಮೀಯ ಸ್ನೇಹಿತೆಯರಿಗೆ ಇನ್ನೊಂದು ಅವಕಾಶ ನೀಡಿದ ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್ | Photo Credit : PTI
ಕೊಚ್ಚಿ,ಡಿ.16: ಕೇರಳ ಉಚ್ಚ ನ್ಯಾಯಾಲಯವು ಮೂತ್ರಪಿಂಡ ದಾನಕ್ಕೆ ಸಂಬಂಧಿಸಿದಂತೆ ಜಂಟಿ ಅರ್ಜಿಯನ್ನು ಸಲ್ಲಿಸಿರುವ ಇಬ್ಬರು ಮಹಿಳೆಯರಿಗೆ ಇನ್ನೊಂದು ಅವಕಾಶವನ್ನು ನೀಡಿ ಮಂಗಳವಾರ ಆದೇಶಿಸಿದೆ. ಇವರ ಪೈಕಿ ಓರ್ವ ಮಹಿಳೆ ಇನ್ನೋರ್ವಳಿಗೆ ತನ್ನ ಮೂತ್ರಪಿಂಡವನ್ನು ದಾನ ಮಾಡಲು ಬಯಸಿದ್ದು, ವಿಭಿನ್ನ ಧರ್ಮಗಳಿಗೆ ಸೇರಿರುವ ಅವರು ತಾವು ಸ್ನೇಹಿತೆಯರು ಎಂದು ಹೇಳಿಕೊಂಡಿದ್ದಾರೆ. ಆದರೆ ರಾಜ್ಯದ ಅಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ.
ಮೂತ್ರಪಿಂಡ ಸ್ವೀಕರಿಸಲು ಬಯಸಿರುವ ಮಹಿಳೆಯ ಅಳಿಯ ಮತ್ತು ದಾನಿ ಮಹಿಳೆಯ ಪತಿ ನೀಡಿದ್ದ ಹೇಳಿಕೆಗಳಲ್ಲಿ ಅಸಮಂಜಸತೆಗಳು ಮೂತ್ರಪಿಂಡ ಕಸಿಗಾಗಿ ಜಿಲ್ಲಾ ಮಟ್ಟದ ಅಧಿಕಾರ ಸಮಿತಿ ಮತ್ತು ಸರಕಾರದ ಹಿಂದಿನ ನಿರಾಕರಣೆಗಳಿಗೆ ಕಾರಣವಾಗಿದ್ದವು ಎಂದು ಹೇಳಿದ ನ್ಯಾ.ಶೋಭಾ ಅನ್ನಮ್ಮ ಈಪನ್ ಅವರು,ಅರ್ಜಿದಾರರು ಸಲ್ಲಿಸಿದ್ದ ದಾಖಲೆಗಳನ್ನು ಪ್ರಾಧಿಕಾರವು ಸೂಕ್ತವಾಗಿ ಪರಿಶೀಲಿಸಿರಲಿಲ್ಲ. ಮೂತ್ರಪಿಂಡ ದಾನವನ್ನು ಸಮರ್ಥಿಸಿಕೊಳ್ಳಲು ತಮ್ಮ ನಡುವಿನ ಸಂಬಂಧವನ್ನು ಸಾಬೀತುಗೊಳಿಸಲು ಅರ್ಜಿದಾರರಿಗೆ ಇನ್ನೊಂದು ಅವಕಾಶವನ್ನು ನೀಡಬೇಕಿದೆ ಎಂದು ತಿಳಿಸಿದರು.
ಮೂತ್ರಪಿಂಡ ದಾನಕ್ಕೆ ಅನುಮತಿ ನಿರಾಕರಿಸಿದ್ದ ಸರಕಾರ ಮತ್ತು ಪ್ರಾಧಿಕಾರದ ಆದೇಶಗಳನ್ನು ಪ್ರಶ್ನಿಸಿ ಈ ಮಹಿಳೆಯರು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ತಮ್ಮ ನಡುವಿನ ಸಂಬಂಧ ಅಥವಾ ಮೂತ್ರಪಿಂಡ ದಾನಕ್ಕೆ ಪ್ರೇರೇಪಿಸಿದ ಸಂದರ್ಭಗಳನ್ನು ಸಾಬೀತುಗೊಳಿಸುವಲ್ಲಿ ವಿಫಲಗೊಂಡಿದ್ದಾರೆ ಎಂಬ ಕಾರಣದಿಂದ ಅವರಿಗೆ ಅನುಮತಿಯನ್ನು ನಿರಾಕರಿಸಲಾಗಿತ್ತು.
ಮಹಿಳೆಯರು ಪರಸ್ಪರ ಸಂಬಂಧಿಗಳಲ್ಲ,ಆದರೆ ಮೂತ್ರಪಿಂಡವನ್ನು ಪಡೆದುಕೊಳ್ಳಲು ಬಯಸಿರುವ ಮಹಿಳೆಯ ಅಳಿಯ ದಾನಿಯ ಪತಿ ಕೆಲಸ ಮಾಡುತ್ತಿರುವ ಐಟಿ-ಆಧಾರಿತ ಕಂಪನಿಯಲ್ಲಿ ಗುತ್ತಿಗೆ ಕೆಲಸವನ್ನು ಪಡೆದುಕೊಂಡಾಗ ಈ ಇಬ್ಬರೂ ಮಹಿಳೆಯರು ಸ್ನೇಹಿತೆಯರಾಗಿದ್ದರು ಎನ್ನಲಾಗಿದೆ.
ದಾನಿಯು ತನ್ನ ಸ್ವಂತ ಇಚ್ಛೆಯಿಂದ ತನ್ನ ಸ್ನೇಹಿತೆಗೆ ತನ್ನ ಮೂತ್ರಪಿಂಡಗಳಲ್ಲೊಂದನ್ನು ದಾನವಾಗಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಸಹಾಯಕ ಪೋಲಿಸ ಆಯುಕ್ತರು ಷರಾ ಬರೆದಿರುವ ‘ಪರಹಿತಚಿಂತನೆ ಪ್ರಮಾಣಪತ್ರ’ವನ್ನು ಅರ್ಜಿದಾರರು ಸಲ್ಲಿಸಿದ್ದಾರೆ ಎನ್ನುವುದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ಈ ಮಹಿಳೆಯರು ತನ್ನ ಪರಿಚಿತರಾಗಿದ್ದಾರೆ ಮತ್ತು ಪ್ರಕರಣದಲ್ಲಿ ಯಾವುದೇ ಹಣದ ವಹಿವಾಟು ಒಳಗೊಂಡಿಲ್ಲ ಎಂದು ಸಂಸದೆಯೋರ್ವರು ನೀಡಿರುವ ಪತ್ರವನ್ನೂ ಇಬ್ಬರು ಮಹಿಳೆಯರು ಸಲ್ಲಿಸಿದ್ದರು.
ಈ ವಿಷಯವನ್ನು ಮರುಪರಿಶೀಲಿಸುವಂತೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಆದೇಶಿಸಿದ ಸಂದರ್ಭದಲ್ಲಿ ನ್ಯಾಯಾಲಯವು ದಾನಿ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ ಮತ್ತು ಅವರ ಪತಿ ರಕ್ತದೊತ್ತಡ ಸಮಸ್ಯೆಗಳಿಂದ ಮತ್ತು ನೆನಪಿನ ಶಕ್ತಿ ನಷ್ಟದಿಂದ ಬಳಲುತ್ತಿರುವ ರೋಗಿಯಾಗಿದ್ದಾರೆ ಎನ್ನುವುದನ್ನು ಪರಿಗಣನೆಗೆ ತೆಗೆದುಕೊಂಡಿತು.
ಭಾರತದಲ್ಲಿ ರೋಗಿಯ ನಿಕಟ ಸಂಬಂಧಿಗಳು ನೇರವಾಗಿ ಮೂತ್ರಪಿಂಡ ದಾನವನ್ನು ಮಾಡಬಹುದು. ಆದರೆ ಸಂಬಂಧಿಗಳಲ್ಲದವರೂ ಕೆಲವು ಷರತ್ತುಗಳಿಗೊಳಪಟ್ಟು ಸರಕಾರದ ಅನುಮತಿಯೊಂದಿಗೆ ಮೂತ್ರಪಿಂಡವನ್ನು ರೋಗಿಗೆ ದಾನ ಮಾಡಬಹುದು.