ಭಿನ್ನ ಧರ್ಮೀಯರ ನಡುವಿನ ಭೂ ಮಾರಾಟವನ್ನು 3 ತಿಂಗಳು ತಡೆ ಹಿಡಿದ ಅಸ್ಸಾಂ ಸರ್ಕಾರ
Himanta Biswa Sarma. | Photo: PTI
ಗುವಾಹಟಿ: ಭಿನ್ನ ಧರ್ಮಗಳಿಗೆ ಸೇರಿದ ವ್ಯಕ್ತಿಗಳ ನಡುವೆ ಭೂಮಿ ಮಾರಾಟಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಿ ಅಸ್ಸಾಂ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧರ್ಮದ ಆಧಾರದಲ್ಲಿ ಸಂಘರ್ಷ ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಮಾರ್ಚ್ 7ರಂದು ಈ ಆದೇಶ ಹೊರಡಿಸಿದೆ. ವಂಚನೆಯ ಮೂಲಕ ಭಿನ್ನ ಧಾರ್ಮಿಕ ಸಮುದಾಯಗಳ ವ್ಯಕ್ತಿಗಳ ನಡುವೆ ಭೂ ವರ್ಗಾವಣೆಗೆ ನಡೆಯುತ್ತಿರುವ ಯತ್ನಗಳ ಬಗ್ಗೆ ಗುಪ್ತಚರ ಏಜನ್ಸಿಗಳಿಂದ ಸರ್ಕಾರಕ್ಕೆ ಮಾಹಿತಿ ಲಭಿಸಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸ್ಥಾಪಿತ ಹಿತಾಸಕ್ತಿಗಳು ಸಂಘರ್ಷ ಉಂಟುಮಾಡುವ ಯತ್ನಕ್ಕೆ ತಡೆಹೇರಲು ನಿರಾಕ್ಷೇಪಣಾ ಪತ್ರ ನೀಡಿಕೆ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ ಆದರೆ ಇಂತಹ ನಿರಾಕ್ಷೇಪಣಾ ಪತ್ರಗಳ ನೀಡಿಕೆ ಅತ್ಯಗತ್ಯವಾಗಿದೆ ಹಾಗೂ ಇದರಿಂದ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗದು ಎಂದು ಆಯಾ ಜಿಲ್ಲಾಧಿಕಾರಿಗಳಿಗೆ ಮನವರಿಕೆಯಾದರೆ ಅಂತಹ ಸನ್ನಿವೇಶಗಳಲ್ಲಿನಿರಾಕ್ಷೇಪಣಾ ಪತ್ರಗಳನ್ನು ನೀಡಬಹುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.