ಅಸ್ಸಾಂ | ಪತಿಯನ್ನು ಹತ್ಯೆಗೈದು, ಪುತ್ರಿಯೊಂದಿಗೆ ದರೋಡೆಯ ಕತೆ ಕಟ್ಟಿದ ಪತ್ನಿ!
Photo : times now news
ದಿಬ್ರುಗಢ್ (ಅಸ್ಸಾಂ): ತನ್ನ ಪತಿಯನ್ನು ತನ್ನ ಅಪ್ರಾಪ್ತ ಪುತ್ರಿಯೊಂದಿಗೆ ಹತ್ಯೆಗೈದು, ಅದನ್ನು ದರೋಡೆ ಎಂದು ಮಹಿಳೆಯೊಬ್ಬರು ಬಿಂಬಿಸಲು ಯತ್ನಿಸಿರುವ ಘಟನೆ ಅಸ್ಸಾಂನ ದಿಬ್ರುಗಢ್ ನಲ್ಲಿ ನಡೆದಿದೆ.
ಮೃತ ವ್ಯಕ್ತಿ ಉದ್ಯಮಿಯಾಗಿದ್ದು, ಉತ್ತಮ್ ಗೊಗೊಯಿ (52) ಎಂದು ಗುರುತಿಸಲಾಗಿದೆ. ಈ ಸಂಬಂಧ ಪೊಲೀಸರು ಮೃತ ವ್ಯಕ್ತಿಯ ಪತ್ನಿ, ಆಕೆಯ ಪುತ್ರಿ ಹಾಗೂ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಜುಲೈ 25ರಂದು ಉತ್ತಮ್ ಗೊಗೊಯಿ ತಮ್ಮ ಸ್ವಗೃಹದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ದರೋಡೆಯಿಂದ ಸಂಭವಿಸಿರುವ ಹತ್ಯೆಯಂತೆ ಕಂಡು ಬಂದಿದ್ದ ಈ ಘಟನೆಯು, ಅವರ ಕುಟುಂಬದ ಆಪ್ತ ಸದಸ್ಯರಿಂದಲೇ ನಡೆದಿರುವ ಹತ್ಯೆ ಎಂಬ ಸಂಗತಿ ತನಿಖೆಯ ವೇಳೆ ಪತ್ತೆಯಾಗಿದೆ.
ಈ ಹತ್ಯೆಯ ಯೋಜನೆಯಲ್ಲಿ ಉತ್ತಮ್ ಗೊಗೊಯಿ ಅವರ ಪತ್ನಿ ಬಾಬಿ ಸೊನೊವಾಲ್ ಗೊಗೊಯಿ ಹಾಗೂ 9ನೇ ತರಗತಿಯ ವಿದ್ಯಾರ್ಥಿನಿಯಾದ 16 ವರ್ಷದ ಅವರ ಪುತ್ರಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಉತ್ತಮ್ ಗೊಗೊಯಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಇನ್ನಿತರ ಇಬ್ಬರು ಆರೋಪಿಗಳ ಪೈಕಿ ಒಬ್ಬನಾದ ದೀಪ್ತಿಜ್ಯೋತಿ ಬುರಗೊಹೈನ್ (21) ಜೊತೆಗೆ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅವರ ಪುತ್ರಿ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಉತ್ತಮ್ ಗೊಗೊಯಿ ಅವರ ಪತ್ನಿ ಬಾಬಿ ಸೊನೊವಾಲ್ ಗೊಗೊಯಿ ಹಾಗೂ ಅವರ ಪುತ್ರಿಯು ದೀಪ್ತಿಜ್ಯೋತಿ ಬುರಗೊಹೈನ್ ಹಾಗೂ ಮತ್ತೊಬ್ಬ ಅಪ್ತಾಪ್ತ ಬಾಲಕನಿಗೆ ದೊಡ್ಡ ಮೊತ್ತದ ಹಣ ಹಾಗೂ ಚಿನ್ನಾಭರಣಗಳನ್ನು ನೀಡಿ ಈ ಕೃತ್ಯವೆಸಗಲು ಸೂಚಿಸಿದ್ದರು ಎಂದು ಆರೋಪಿಸಲಾಗಿದೆ. ಈ ಪೈಕಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ದಿಬ್ರುಗಢ್ ಜಿಲ್ಲೆಯ ಹಿರಿಯ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರೆಡ್ಡಿ, “ಪೊಲೀಸರಿಗೆ ಗೊಂದಲ ಮೂಡಿಸಲು ಅವರು ಇದನ್ನೊಂದು ದರೋಡೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದರು. ಆದರೆ, ಅವರ ಹೇಳಿಕೆಗಳು ಹೊಂದಾಣಿಕೆಯಾಗಲಿಲ್ಲ. ವಿಧಿವಿಜ್ಞಾನ ಸಾಕ್ಷ್ಯಗಳೂ ಕೂಡಾ ಅವರು ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ದೃಢಪಡಿಸಿದವು” ಎಂದು ತಿಳಿಸಿದ್ದಾರೆ.
ಉತ್ತಮ್ ಗೊಗೊಯಿ ಅಪಾರ ಗೌರವಾದರ ಹೊಂದಿದ್ದ ದಿಬ್ರುಗಢ್ ಜಿಲ್ಲೆಯ ನೆರೆಯ ಗ್ರಾಮವಾದ ಲಾಹೋನ್ ಗಾಂವ್ ಅನ್ನು ಈ ಘಟನೆ ದಿಗ್ಭ್ರಮೆಗೊಳಿಸಿದೆ. ಆರೋಪಿಗಳ ಬಂಧನವಾಗುತ್ತಿದ್ದಂತೆಯೇ, ಬಾರ್ಬುರುವಾದಲ್ಲಿ ಭಾರಿ ಪ್ರತಿಭಟನೆ ನಡೆದಿದ್ದು, ಈ ಘಟನೆಯಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.