ಸಂವಿಧಾನದ ಮೇಲಿನ ದಾಳಿ : ಸಿಜೆಐ ಗವಾಯಿ ಮೇಲೆ ಶೂ ಎಸೆತ ಪ್ರಕರಣದ ಬಗ್ಗೆ ಸೋನಿಯಾ ಗಾಂಧಿ ಆಕ್ರೋಶ
Update: 2025-10-07 10:24 IST
Photo | indiatoday
ಹೊಸದಿಲ್ಲಿ : ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲಿನ ದಾಳಿ ಕೇವಲ ಅವರ ಮೇಲಿನ ದಾಳಿಯಲ್ಲ, ಸಂವಿಧಾನದ ಮೇಲಿನ ದಾಳಿ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿಯೇ ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಲು ಯಾವುದೇ ಪದಗಳು ಸಾಲದು. ಇದು ಅವರ ಮೇಲೆ ನಡೆದ ಹಲ್ಲೆ ಮಾತ್ರವಲ್ಲ. ನಮ್ಮ ಸಂವಿಧಾನದ ಮೇಲೂ ನಡೆದ ದಾಳಿಯಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಬಹಳ ಕರುಣಾಮಯಿಯಾಗಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರವು ಅವರ ಜೊತೆ ಒಗ್ಗಟ್ಟಿನಿಂದ ನಿಲ್ಲಬೇಕು. ನ್ಯಾಯಾಲಯದ ವಿಚಾರಣೆಯ ವೇಳೆ 71ರ ಹರೆಯದ ವಕೀಲರೊಬ್ಬರು ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದರು. ಆದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ಇದು ಆಘಾತಕಾರಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.