ಮೇಘಾಲಯ ಸಿಎಂ ಕಚೇರಿ ಮೇಲೆ ದಾಳಿ: ಬಿಜೆಪಿ ಮಹಿಳಾ ಪದಾಧಿಕಾರಿ ಸೇರಿ 18 ಮಂದಿ ಬಂಧನ
Photo Credit: Meghalaya CMO
ಶಿಲ್ಲಾಂಗ್: ಮೇಘಾಲಯದ ತುರಾ ನಗರದಲ್ಲಿ ಮುಖ್ಯಮಂತ್ರಿ ಕಚೇರಿಯ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ. ಸಿಎಂ ಕಛೇರಿ ಮೇಲಿನ ದಾಳಿಯಲ್ಲಿ ಐದು ಪೊಲೀಸರಿಗೆ ಗಾಯವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಕಟ್ಟಡದ ಮೇಲೆ ದಾಳಿ ಮಾಡಲು ಗುಂಪನ್ನು ಪ್ರಚೋದಿಸಿದ ಆರೋಪದ ಮೇಲೆ ಇಬ್ಬರು ಟಿಎಂಸಿ ನಾಯಕರ ಬಂಧನಕ್ಕೂ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎಂದು deccanherald.com ವರದಿ ಮಾಡಿದೆ.
ತುರಾ ನಗರವನ್ನು ಈಶಾನ್ಯ ರಾಜ್ಯದ ಚಳಿಗಾಲದ ರಾಜಧಾನಿಯನ್ನಾಗಿ ಮಾಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಚಿಕ್ ಕಾನ್ಷಿಯಸ್ ಹೋಲಿಸ್ಟಿಕಲಿ ಇಂಟಿಗ್ರೇಟೆಡ್ ಕ್ರಿಮಾ (ACHIK) ಮತ್ತು ಗಾರೊ ಹಿಲ್ಸ್ ಸ್ಟೇಟ್ ಮೂವ್‌ಮೆಂಟ್ ಕಮಿಟಿ (GHSMC) ಯ ಮುಖಂಡರೊಂದಿಗೆ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಸಭೆ ನಡೆಸುತ್ತಿದ್ದಾಗ ಈ ದಾಳಿ ನಡೆದಿದೆ.
ಉದ್ರಿಕ್ತ ಗುಂಪು ಸಿಎಂ ಕಛೇರಿಗೆ ಬೆಂಕಿ ಹಚ್ಚಿದೆ. ಹಿಂಸಾಚಾರದಲ್ಲಿ ಕಟ್ಟಡದೊಳಗಿದ್ದ ಸಿಎಂಗೆ ಯಾವುದೇ ಗಾಯವಾಗಿಲ್ಲ ಎಂದು ವರದಿಯಾಗಿದೆ.
“ಸೋಮವಾರ ರಾತ್ರಿ ತುರಾದಲ್ಲಿರುವ ಸಿಎಂ ಕಚೇರಿಯನ್ನು ಧ್ವಂಸ ಮಾಡಿದ ಮತ್ತು ಬೆಂಕಿ ಹಚ್ಚಿದ ಆರೋಪದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಕನಿಷ್ಠ 21 ವಾಹನಗಳಿಗೆ ಹಾನಿಯಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ,'' ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಬಿಜೆಪಿ ಮಹಿಳಾ ಮೋರ್ಚಾದ ಇಬ್ಬರು ಪದಾಧಿಕಾರಿಗಳನ್ನು ಬೆಲಿನಾ ಎಂ ಮರಕ್ ಮತ್ತು ದಿಲ್ಚೆ ಚ್ ಮರಕ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜನಸಮೂಹವನ್ನು ಹಿಂಸಾಚಾರಕ್ಕೆ ಪ್ರೇರೇಪಿಸಿದ ಆರೋಪದ ಮೇಲೆ ಇಬ್ಬರು ಟಿಎಂಸಿ ನಾಯಕರಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಾಯಗೊಂಡಿರುವ ಪೊಲೀಸರಿಗೆ 50 ಸಾವಿರ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
ಘಟನೆಯ ನಂತರ ಸೋಮವಾರ ರಾತ್ರಿ ತುರಾ ಪಟ್ಟಣದಲ್ಲಿ ಜಿಲ್ಲಾ ಉಪ ಆಯುಕ್ತ ಜಗದೀಶ್ ಚೆಲಾನಿ ರಾತ್ರಿ ಕರ್ಫ್ಯೂ ವಿಧಿಸಿದ್ದು, ಜಿಲ್ಲಾಡಳಿತ ಪ್ರಸ್ತುತ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸುತ್ತಿದೆ ಎಂದು ಇನ್ನೊರ್ವ ಅಧಿಕಾರಿ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ತುರಾ ಪುರಸಭೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.