×
Ad

ಬಡಕೈದಿಗಳು ಜಾಮೀನು ಪಡೆಯಲು,ದಂಡ ಕಟ್ಟಲು ಕೇಂದ್ರೀಯ ನಿಧಿ ಬಳಕೆಗೆ ರಾಜ್ಯಗಳಿಗೆ ಎಂಎಚ್‌ಎ ಸೂಚನೆ

Update: 2025-06-04 20:42 IST

PC : PTI 

ಹೊಸದಿಲ್ಲಿ: ಹಣಕಾಸಿನ ತೊಂದರೆಯಿಂದ ಜಾಮೀನು ಪಡೆದುಕೊಳ್ಳಲು ಅಥವಾ ದಂಡವನ್ನು ಪಾವತಿಸಲಾಗದೆ ಜೈಲಿನಿಂದ ಬಿಡುಗಡೆಗೊಳ್ಳಲು ಸಾಧ್ಯವಾಗದ ಬಡಕೈದಿಗಳಿಗೆ ಕೇಂದ್ರೀಯ ನಿಧಿಯಿಂದ ಆರ್ಥಿಕ ನೆರವು ಒದಗಿಸುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್‌ಎ)ವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ತಾನು ಲಭ್ಯವಾಗಿಸಿರುವ ನಿಧಿಯನ್ನು ಬಳಸಿಕೊಳ್ಳುವಂತೆ ಮತ್ತು ಅರ್ಹ ಕೈದಿಗಳಿಗೆ ನೆರವಾಗಲು ಸೂಕ್ತ ಮೊತ್ತವನ್ನು ಅದರಿಂದ ಪಡೆದುಕೊಳ್ಳುವಂತೆ ಸಚಿವಾಲಯವು ತನ್ನ ಪತ್ರದಲ್ಲಿ ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ನೋಡಲ್ ಏಜೆನ್ಸಿ(ಸಿಎನ್‌ಎ)ಯ ಮೂಲಕ ಹಣವನ್ನು ಒದಗಿಸಲಾಗುತ್ತದೆ. ಈ ಯೋಜನೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ(ಎನ್‌ಸಿಆರ್‌ಬಿ)ವನ್ನು ಸಿಎನ್‌ಎ ಆಗಿ ನಿಯೋಜಿಸಲಾಗಿದೆ.

ಹಣಕಾಸಿನ ತೊಂದರೆಯಿಂದಾಗಿ ಜಾಮೀನು ಪಡೆದುಕೊಳ್ಳಲು ಅಥವಾ ದಂಡವನ್ನು ಪಾವತಿಸಲಾಗದೆ ಜೈಲಿನಿಂದ ಬಿಡುಗಡೆಗೊಳ್ಳಲು ಸಾಧ್ಯವಾಗದ ಬಡಕೈದಿಗಳಿಗೆ ಪರಿಹಾರವನ್ನು ಒದಗಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದೊಂದಿಗೆ ಗೃಹ ಸಚಿವಾಲಯವು ಮೇ 2023ರಲ್ಲಿ ‘ಬಡಕೈದಿಗಳಿಗೆ ಬೆಂಬಲ ಯೋಜನೆ’ಯನ್ನು ಪರಿಚಯಿಸಿತ್ತು. ಆದರೆ ಪದೇ ಪದೇ ನೆನಪಿಸಿದ್ದರೂ ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅರ್ಹ ಕೈದಿಗಳನ್ನು ಗುರುತಿಸಿಲ್ಲ ಮತ್ತು ಅವರಿಗೆ ಯೋಜನೆಯ ಲಾಭಗಳನ್ನು ಒದಗಿಸಿಲ್ಲ, ಹೀಗಾಗಿ ಈ ನಿಧಿಗಳು ಬಳಕೆಯಾಗದೆ ಉಳಿದುಕೊಂಡಿವೆ ಎಂದು ಎಂಎಚ್‌ಎ ಪತ್ರದಲ್ಲಿ ಬೆಟ್ಟು ಮಾಡಿದೆ.

ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಣವನ್ನು ಬಳಸಿಕೊಂಡಿವೆಯಾದರೂ, ಅವುಗಳಿಂದ ಯೋಜನೆಯ ಒಟ್ಟಾರೆ ಅನುಷ್ಠಾನವು ಅಷ್ಟೇನೂ ಉತ್ತೇಜನಕಾರಿಯಾಗಿಲ್ಲ ಎಂದು ಅದು ತಿಳಿಸಿದೆ.

ಗೃಹ ಸಚಿವಾಲಯವು ಯೋಜನೆಯ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳು ಮತ್ತು ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ)ವನ್ನು ಈಗಾಗಲೇ ಹೊರಡಿಸಿದೆ.

ಮಾರ್ಗಸೂಚಿಗಳ ಭಾಗವಾಗಿ ಪ್ರತಿ ಜಿಲ್ಲೆಯಲ್ಲಿ ಅಧಿಕಾರಯುತ ಸಮಿತಿ ಮತ್ತು ರಾಜ್ಯ ಕೇಂದ್ರಸ್ಥಾನದ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಈ ಸಮಿತಿಗಳು ಅರ್ಹ ಕೈದಿಗಳಿಗೆ ಹಣಕಾಸು ನೆರವು ಮಂಜೂರು ಮಾಡುವ ಹೊಣೆಗಾರಿಕೆಯನ್ನು ಹೊಂದಿರುತ್ತವೆ.

ಯೋಜನೆಯ ಪರಿಣಾಮಕಾರಿ ಅನುಷ್ಠಾನವು ಬಡಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ತಗ್ಗಿಸಲು ನೆರವಾಗುವುದು ಮಾತ್ರವಲ್ಲ,ಜೈಲುಗಳಲ್ಲಿ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡಲೂ ಸಹಕಾರಿಯಾಗುತ್ತದೆ ಎಂದು ಸಚಿವಾಲಯವು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News