×
Ad

ಅಮೆರಿಕದಲ್ಲಿ ಕನ್ನಡಿಗನ ಶಿರಚ್ಚೇದನಗೈದು ಬರ್ಬರ ಹತ್ಯೆ; ಸಹದ್ಯೋಗಿಯಿಂದ ಪಾತಕ ಕೃತ್ಯ

Update: 2025-09-12 22:22 IST

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.12: ಅಮೆರಿಕದ ಡಲ್ಲಾಸ್‌ ನ ಹೊಟೇಲ್ ಒಂದರಲ್ಲಿ 50 ವರ್ಷದ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು, ಅವರ ಪತ್ನಿ ಹಾಗೂ ಪುತ್ರನ ಎದುರಲ್ಲೇ ಸಹದ್ಯೋಗಿಯೊಬ್ಬ ಶಿರಚ್ಚೇದ ಮಾಡಿ ಹತ್ಯೆಗೈದ ಭಯಾನಕ ಘಟನೆ ಬುಧವಾರ ನಡೆದಿದೆ.

ಚಂದ್ರಮೌಳಿ ನಾಗಮಲ್ಲಯ್ಯ ಮೃತಪಟ್ಟ ಕನ್ನಡಿಗ. ಅವರು ಡಲ್ಲಾಸ್‌ನ ಹೊಟೇಲ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ವಾಶಿಂಗ್‌ ಮೆಶಿನ್ ಹಾನಿಗೀಡಾದ ವಿಚಾರವಾಗಿ ಉಂಟಾದ ವಾಗ್ವಾದದ ಹಿನ್ನಲೆಯಲ್ಲಿ ಸಹೋದ್ಯೋಗಿಯೊಬ್ಬ ಚಂದ್ರಮೌಳಿ ಅವರನ್ನು ಕತ್ತಿಯಿಂದ ತಲೆಗೆ ಕಡಿದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಸಹದ್ಯೋಗಿ , ಕ್ಯೂಬಾ ಪ್ರಜೆ ಯೊರ್ಡಾನಿಸ್ ಕೊಬೊಸ್ ಮಾರ್ಟಿನೆಝ್‌ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.

ಆರೋಪಿ ಕೊಬೋಸ್, ಹೊಟೇಲ್‌ನಿಂದ ನಾಗಮಲ್ಲಯ್ಯ ಅವರನ್ನು ಪಾರ್ಕಿಂಗ್ ಸ್ಥಳವರೆಗೂ ಅಟ್ಟಾಡಿಸಿಕೊಂಡು ಹೋಗಿದ್ದು, ಅವರಿಗೆ ಹಲವಾರು ಸಲ ಇರಿದಿದ್ದಾನೆ. ಆನಂತರ ಅವರ ಶಿರಚ್ಚೇದನಗೈದು ತಲೆಯನ್ನು ಕಾಲಿನಿಂದ ತುಳಿದ ಬಳಿಕ, ತ್ಯಾಜ್ಯದತೊಟ್ಟಿಗೆ ಎಸೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಕೊಬೊಸ್ ಮಾರ್ಟಿನೆಝ್ ಮಾರಕಾಯುಧವನ್ನು ಝಳಪಿಸುತ್ತಾ ನಾಗಮಲ್ಲಯ್ಯರ ಶಿರಚ್ಚೇದನ ಮಾಡಿದಾಗ ಅವರ ಪತ್ನಿ ಹಾಗೂ 18 ವರ್ಷದ ಪುತ್ರ ಸೇರಿದಂತೆ ಸ್ಥಳದಲ್ಲಿದ್ದವರು ಅಸಹಾಯಕರಾಗಿ ನೋಡಬೇಕಾಯಿತು.

ಹೌಸ್ಟನ್‌ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ನಾಗಮಲ್ಲಯ್ಯ ಅವರ ಧಾರುಣ ಹತ್ಯೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

‘‘ನಾವು ಸಂತ್ರಸ್ತ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲಾ ನೆರವನ್ನು ನೀಡಲಿದ್ದೇವೆ. ಕೊಲೆ ಆರೋಪಿಯನ್ನು ಡಲ್ಲಾಸ್ ಜೈಲಿನಲ್ಲಿರಿಸಲಾಗಿದ್ದು, ವಿಷಯವನ್ನು ತೀರಾ ನಿಕಟವಾಗಿ ಪರಿಶೀಲಿಸುತ್ತಿದ್ದೇವೆ’’ ಎಂದು ರಾಯಭಾರಿ ಕಚೇರಿ ಎಕ್ಸ್‌ ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News