×
Ad

ಬಿಹಾರ: ಸರಕಾರಿ ಉದ್ಯೋಗಗಳಲ್ಲಿ ಶೇ.35 ಮಹಿಳಾ ಮೀಸಲಾತಿ ರಾಜ್ಯದ ಖಾಯಂ ನಿವಾಸಿಗಳಿಗೆ ಮಾತ್ರ!

Update: 2025-07-08 21:00 IST

PC : PTI 

ಪಾಟ್ನಾ: ಸರಕಾರಿ ಉದ್ಯೋಗಿಗಳಾಗಲು ರಾಜ್ಯದ ಖಾಯಂ ನಿವಾಸಿಯಾಗಿರುವುದು ಅಗತ್ಯವಲ್ಲ ಎಂಬ ತನ್ನ ಈಗಿನ ನೀತಿಗೆ ಬಿಹಾರ ಸರಕಾರವು ವಿದಾಯ ಹೇಳಿದೆ. ಎಲ್ಲ ಸರಕಾರಿ ಉದ್ಯೋಗಗಳಲ್ಲಿ ಹಾಲಿ ಇರುವ ಶೇ.35ರಷ್ಟು ಮಹಿಳಾ ಮೀಸಲಾತಿಯನ್ನು ಬಿಹಾರದ ಖಾಯಂ ನಿವಾಸಿಗಳಿಗೆ ಮಾತ್ರ ಅನ್ವಯಿಸುವ ಪ್ರಸ್ತಾವಕ್ಕೆ ಮಂಗಳವಾರ ನಡೆದ ಸಂಪುಟ ಸಭೆಯು ಅನುಮೋದನೆಯನ್ನು ನೀಡಿದೆ. 

ಅಂದರೆ ಬಿಹಾರದ ನಿವಾಸಿಗಳಲ್ಲದ ಮಹಿಳೆಯರು ಇನ್ನು ಮುಂದೆ ರಾಜ್ಯದಲ್ಲಿಯ ಸರಕಾರಿ ಉದ್ಯೋಗಗಳಿಗೆ ಅರ್ಹರಾಗಿರುವುದಿಲ್ಲ. ಈ ಹಿಂದೆ ಶಿಕ್ಷಕರ ಸಾಮೂಹಿಕ ನೇಮಕಾತಿ ಸಂದರ್ಭದಲ್ಲಿ ವಾಸಸ್ಥಳ ನೀತಿಯನ್ನು ಅನ್ವಯಿಸದ್ದಕ್ಕಾಗಿ ಸರಕಾರವು ತೀವ್ರ ಟೀಕೆಗೆ ಗುರಿಯಾಗಿತ್ತು.

ಇದು ಇತ್ತೀಚಿನ ದಿನಗಳಲ್ಲಿ ಬಿಹಾರ ಸರಕಾರವು ವಾಸಸ್ಥಳ ನೀತಿಯನ್ನು ಜಾರಿಗೊಳಿಸಿರುವ ಮೊದಲ ನಿದರ್ಶನವಾಗಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಸಂಪುಟ) ಎಸ್.ಸಿದ್ಧಾರ್ಥ ಅವರು,ಈಗ ಬಿಹಾರದ ಖಾಯಂ ನಿವಾಸಿಗಳಾಗಿರುವ ಮಹಿಳೆಯರು ಮಾತ್ರ ಸರಕಾರಿ ಉದ್ಯೋಗಗಳಲ್ಲಿ ಹಾಲಿ ಇರುವ ಶೇ.35 ಮಹಿಳಾ ಮೀಸಲಾತಿಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಚುನಾವಣೆಗೆ ಮುನ್ನ ಸಂಪುಟದ ಈ ನಿರ್ಧಾರವು ಮಹತ್ವ ಪಡೆದುಕೊಂಡಿದ್ದು,ತನ್ನ ‘ಜಾತಿ-ತಟಸ್ಥ’ ಮಹಿಳಾ ವೋಟ್ ಬ್ಯಾಂಕ್ನ್ನು ಕ್ರೋಡೀಕರಿಸುವ ನಿತೀಶ ಕುಮಾರ ಸರಕಾರದ ಇನ್ನೊಂದು ಪ್ರಯತ್ನವಾಗಿದೆ.

ಇನ್ನೊಂದು ಮಹತ್ವದ ನಿರ್ಧಾರದಲ್ಲಿ ಸಂಪುಟವು ಬಿಹಾರ ಯುವ ಆಯೋಗದ ರಚನೆಯನ್ನು ಪ್ರಕಟಿಸಿದೆ. ಇದು ರಾಜ್ಯದ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಬಿಹಾರ ಸರಕಾರವು 2016ರಲ್ಲಿ ಸರಕಾರಿ ಉದ್ಯೋಗಗಳಲ್ಲಿ ಎಲ್ಲ ಹಂತಗಳಲ್ಲಿ ಮಹಿಳೆಯರಿಗೆ ಶೇ.35ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿತ್ತು. ಯಾವುದೇ ರಾಜ್ಯದಿಂದ ಬಿಹಾರಕ್ಕೆ ಬಂದು ನೆಲೆಸಿದ ಮಹಿಳೆಯರು ಈ ಮೀಸಲಾತಿಯ ಲಾಭವನ್ನು ಪಡೆಯಬಹುದಿತ್ತು. ಸರಕಾರವು ಈಗ ಮೀಸಲಾತಿಯನ್ನು ರಾಜ್ಯದ ಖಾಯಂ ನಿವಾಸಿಗಳಿಗೆ ಮಾತ್ರ ಅನ್ವಯಿಸಿದ್ದು,ಹೊರ ರಾಜ್ಯಗಳ ಮಹಿಳೆಯರಿಗೆ ಹಿನ್ನಡೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News