ಬಿಹಾರ ಚುನಾವಣೆ: ಎನ್‌ಡಿಎ ದೋಸ್ತಿ ಪಕ್ಷಗಳ ನಡುವೆ ಕುಸ್ತಿ!
PC: PTI
ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಿಜೆಪಿ ಮತ್ತು ಜೆಡಿಯು ನಾಯಕರ ಹೇಳಿಕೆಗಳು ದೃಢಪಡಿಸಿವೆ. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ; ಆದರೆ ಮುಂದಿನ ಸಿಎಂ ಯಾರು ಎನ್ನುವುದನ್ನು ಆಯ್ಕೆಯಾದ ಶಾಸಕರು ನಿರ್ಧರಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಜೆಡಿಯು, ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ನಿತೀಶ್ ಕುಮಾರ್ ಸಿಎಂ ಆಗಿ ಮರಳುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಸ್ಪಷ್ಟಪಡಿಸಿದೆ.
"ಮೈತ್ರಿಕೂಟದ ಪಾಲುದಾರ ಪಕ್ಷಗಳ ಶಾಸಕರು ಮೊದಲು ತಮ್ಮ ಪಕ್ಷದ ನಾಯಕರನ್ನು ಆಯ್ಕೆ ಮಾಡುತ್ತಾರೆ. ಅವರು ಜತೆಗೆ ಕುಳಿತು ಮುಂದಿನ ಸರ್ಕಾರ ಮುಖ್ಯಸ್ಥರು ಯಾರಾಗಬೇಕು ಎಂದು ನಿರ್ಧರಿಸುತ್ತಾರೆ" ಎಂದು ಗೃಹ ಸಚಿವ ಅಮಿತ್ ಶಾ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಜೆಡಿಯು ವಕ್ತಾರ ನೀರಜ್ ಕುಮಾರ್, "ನಿತೀಶ್ ಅವರ ನಾಯಕತ್ವದಲ್ಲಿ ಚನಾವಣೆ ಎದುರಿಸಿದ್ದೇವೆ ಎಂದಾದ ಬಳಿಕ ಬೇರೆ ಯಾರಾದರೂ ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ? ಅವರು ಇಡೀ ಸಮುದಾಯಗಳ ನೈಜ ಪ್ರತಿನಿಧಿ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ಇದಕ್ಕೆ ಪ್ರತಿಕ್ರಿಯಿಸಿ, "ನಿತೀಶ್ ನಹಿ ಬನೇಂಗೆ ಸಿಎಂ, ಅಮಿತ್ ಶಾ ನೇ ಕರ್ ದಿಯಾ ಕ್ಲಿಯರ್" ಎಂದು ಹೇಳಿದೆ. ಅಂತೆಯೇ ಮೊದಲ ಹಂತದಲ್ಲಿ ಚುನಾವಣೆ ನಡೆಯುವ 121 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರವೂ ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳಲ್ಲೂ ಸೀಟುಹಂಚಿಕೆ ಗೊಂದಲ ಮುಂದುವರಿದಿದೆ. ಈ ಪೈಕಿ 71 ಸ್ಥಾನಗಳಿಗೆ ಆರ್‌ಜೆಡಿ ನಾಮಪತ್ರ ಸಲ್ಲಿಸಿದೆ ಎಂದು ವಕ್ತಾರ ಚಿತ್ತರಂಜನ್ ಗಗನ್ ಹೇಳಿದ್ದಾರೆ. ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಸೇರಿದಂತೆ 1698 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.