×
Ad

ಬಿಹಾರ ಚುನಾವಣೆಯೋ? ಟ್ರಂಪ್ ಸುಂಕವೋ?: ದಿಢೀರ್‌ ಜಿಎಸ್‌ಟಿ ಇಳಿಕೆಗೆ ಕಾರಣ ಕೇಳಿದ ಪಿ. ಚಿದಂಬರಂ

ಕಳೆದ 8 ವರ್ಷಗಳಿಂದ ಜಿಎಸ್‌ಟಿ ದರಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಸರಕಾರ ಗಮನ ಕೊಡಲಿಲ್ಲ ಎಂದ ಕಾಂಗ್ರೆಸ್‌ ನಾಯಕ

Update: 2025-09-04 12:17 IST

 ಪಿ. ಚಿದಂಬರಂ (Photo: PTI)

ಹೊಸದಿಲ್ಲಿ : ಕೇಂದ್ರ ಸರಕಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಯನ್ನು ಕಡಿತಗೊಳಿಸಿರುವುದನ್ನು ಕಾಂಗ್ರೆಸ್ ನಾಯಕ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸ್ವಾಗತಿಸಿದ್ದಾರೆ. ಆದರೆ, ಈ ನಿರ್ಧಾರ ತೆಗೆದುಕೊಳ್ಳಲು 8 ವರ್ಷ ಯಾಕೆ ಬೇಕಾಯಿತು ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಿ. ಚಿದಂಬರಂ, ಜಿಎಸ್‌ಟಿ ಸರಳೀಕರಣ ಮತ್ತು ವಿವಿಧ ಸರಕು ಮತ್ತು ಸೇವೆಗಳ ಮೇಲಿನ ದರಗಳ ಕಡಿತ ಸ್ವಾಗತಾರ್ಹ. ಆದರೆ 8 ವರ್ಷಗಳು ತುಂಬಾ ತಡವಾಗಿದೆ. ಪ್ರಸ್ತುತ ಜಿಎಸ್‌ಟಿ ವಿನ್ಯಾಸ ಮತ್ತು ಇಂದಿನವರೆಗೆ ಚಾಲ್ತಿಯಲ್ಲಿರುವ ದರಗಳನ್ನು ಮೊದಲಿಗೆ ಪರಿಚಯಿಸಬಾರದಿತ್ತು. ಕಳೆದ 8 ವರ್ಷಗಳಿಂದ ನಾವು ಜಿಎಸ್‌ಟಿ ವಿನ್ಯಾಸ ಮತ್ತು ದರಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಸರಕಾರ ಗಮನ ಕೊಡಲಿಲ್ಲ ಎಂದು ಚಿದಂಬರಂ ಹೇಳಿದರು.

ನಿಧಾನಗತಿಯ ಬೆಳವಣಿಗೆ, ಹೆಚ್ಚುತ್ತಿರುವ ಗೃಹ ಸಾಲ, ಕುಸಿಯುತ್ತಿರುವ ಉಳಿತಾಯ, ಮುಂಬರುವ ಬಿಹಾರ ಚುನಾವಣೆಗಳು ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕಾಸ್ತ್ರ ಸರಕಾರ ದಿಢೀರ್ ಜಿಎಸ್‌ಟಿ ತಿದ್ದುಪಡಿಗೆ ಕಾರಣವಾಗಿರಬಹುದು ಎಂದು ಪಿ. ಚಿದಂಬರಂ ಅಂದಾಜಿಸಿದ್ದಾರೆ.

“ಸರಕಾರ ಬದಲಾವಣೆಗಳನ್ನು ಮಾಡಲು ಕಾರಣವೇನು ಎಂಬುದರ ಕುರಿತು ಊಹಿಸುವುದು ಆಸಕ್ತಿದಾಯಕವಾಗಿರುತ್ತದೆ. ನಿಧಾನಗತಿಯ ಬೆಳವಣಿಗೆ? ಹೆಚ್ಚುತ್ತಿರುವ ಗೃಹ ಸಾಲ? ಕುಸಿಯುತ್ತಿರುವ ಗೃಹ ಉಳಿತಾಯ? ಬಿಹಾರದಲ್ಲಿ ಚುನಾವಣೆಗಳು? ಟ್ರಂಪ್ ಮತ್ತು ಅವರ ಸುಂಕಗಳು? ಮೇಲಿನ ಎಲ್ಲವೂ?" ಎಂದು ಚಿದಂಬರಂ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಶೇ.5 ಮತ್ತು ಶೇ.18ರ ಎರಡು ಹಂತದ ತೆರಿಗೆ ರಚನೆಗೆ ಅನುಮೋದನೆ ನೀಡಲಾಗಿದೆ. ಈ ಹಿಂದೆ ಇದ್ದ ಶೇ.12 ಮತ್ತು ಶೇ.28ರಷ್ಟಿದ್ದ ತೆರಿಗೆ ವ್ಯವಸ್ಥೆ ರದ್ದು ಮಾಡಲಾಗಿದೆ. ಈ ಹೊಸ ಜಿಎಸ್ ಟಿ ವ್ಯವಸ್ಥೆ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News