ಬಿಹಾರ ಮತಪಟ್ಟಿ ಪರಿಷ್ಕರಣೆ: ಗಣತಿ ಫಾರ್ಮ್ ಸಲ್ಲಿಸಿದವರೆಷ್ಟು ಗೊತ್ತೇ?
ಹೊಸದಿಲ್ಲಿ: ಚುನಾವಣಾ ಆಯೋಗ ಬಿಹಾರದಲ್ಲಿ ಕೈಗೊಂಡಿರುವ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಒಟ್ಟು 7.9 ಕೋಟಿ ಮತದಾರರ ಪೈಕಿ ಶೇಕಡ 5.8ರಷ್ಟು ಮಂದಿ ಅಥವಾ 45.8 ಲಕ್ಷ ಮತದಾರರು ತಮ್ಮ ಗಣತಿ ಫಾರ್ಮ್ ಇನ್ನೂ ಸಲ್ಲಿಸಿಲ್ಲ ಎಂಬ ಅಂಶವನ್ನು ಚುನಾವಣಾ ಆಯೋಗ ಬಹಿರಂಗಪಡಿಸಿದೆ. ಗಣತಿ ಫಾರ್ಮ್ ಸಲ್ಲಿಕೆಗೆ ಜುಲೈ 25 ಕೊನೆಯ ದಿನವಾಗಿದೆ.
ಸುಮಾರು 7.1 ಕೋಟಿ ಮತದಾರರು ಅಂದರೆ ಶೇಕಡ 89.7ರಷ್ಟು ಮತದಾರರು ಅರ್ಜಿ ನಮೂನೆಗಳನ್ನು ಸಲ್ಲಿಸಿದ್ದಾರೆ. ಶೇಕಡ 4.5ರಷ್ಟು ಮಂದಿ ತಮ್ಮ ವಿಳಾಸಗಳಲ್ಲಿ ಪತ್ತೆ ಇಲ್ಲ. ಬಹುಶಃ ಇವರಲ್ಲಿ ಮೃತಪಟ್ಟಿರುವವರು, ಕಾಯಂ ಆಗಿ ಸ್ಥಳಾಂತರಗೊಂಡವರು ಅಥವಾ ಹಲವು ಕಡೆಗಳಲ್ಲಿ ನೋಂದಾಯಿಸಿಕೊಂಡಿರುವವರು ಸೇರಿದ್ದಾರೆ ಎಂದು ಆಯೋಗ ಗುರುವಾರ ವಿವರಣೆ ನೀಡಿದೆ.
ಬೂತ್ ಮಟ್ಟದ ಅಧಿಕಾರಿಗಳಿಗೆ ಕಡ್ಡಾಯಪಡಿಸಿದಂತೆ ಮೂರು ಬಾರಿ ಭೇಟಿ ನೀಡಿದಾಗಲೂ ಮತದಾರರು ದಾಖಲಾಗಿರುವ ವಿಳಾಸಗಳಲ್ಲಿ ಪತ್ತೆಯಾಗಿಲ್ಲ. ಈ ಮಾಹಿತಿಯನ್ನು ರಾಜಕೀಯ ಪಕ್ಷಗಳ ಜಿಲ್ಲಾ ಅಧ್ಯಕ್ಷರುಗಳಿಗೆ ಮತ್ತು ಬೂತ್ ಮಟ್ಟದ ಏಜೆಂಟರಿಗೆ ಶುಕ್ರವಾರದ ಬಳಿಕ ರವಾನಿಸಲಾಗುವುದು. ಅಂಥ ಮತದಾರರ ಸ್ಥಿತಿಗತಿಯ ಬಗ್ಗೆ ಅವರು ಅಂತಿಮ ಗಡುವಾದ ಜುಲೈ 25ರ ಒಳಗೆ ನಿಖರ ಮಾಹಿತಿ ನೀಡಬೇಕಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಜುಲೈ 25ರ ಮುನ್ನ ಗಣತಿ ಫಾರ್ಮ್ ನೀಡುವ ಎಲ್ಲರ ಹೆಸರುಗಳನ್ನು ಜುಲೈ 25ರ ಒಳಗೆ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಿ ಆಗಸ್ಟ್ 1ರಂದು ಇದನ್ನು ಪ್ರಕಟಿಸಲಾಗುವುದು. ಇಸಿಐನೆಟ್ ಆ್ಯಪ್ ನಲ್ಲಿ ಅಥವಾ ಚುನಾವಣಾ ಆಯೋಗದ ಮತದಾರರ ಪೋರ್ಟೆಲ್ ನಲ್ಲಿ ಮತದಾರರು ತಮ್ಮ ಗಣತಿ ಫಾರ್ಮ್ ಗಳ ಸ್ಥಿತಿಗತಿಯನ್ನು ಪರಿಶೀಲಿಸಬಹುದು ಎಂದು ಹೇಳಿದೆ.
ಚುನಾವಣಾ ಆಯೋಗ ಈಗಾಗಲೇ ಬಿಹಾರದ ಹೊರಗೆ ಇರುವ ವಲಸೆ ಕಾರ್ಮಿಕರನ್ನು ಸಂಪರ್ಕಿಸಿ, ತಮ್ಮ ಮೊಬೈಲ್ ಫೋನ್ ಗಳ ಮೂಲಕ ಆನ್ಲೈನ್ ನಲ್ಲಿ ಗಣತಿ ಫಾರ್ಮ್ ಗಳನ್ನು ಇಸಿಐನೆಟ್ ಆ್ಯಪ್ ಮೂಲಕ ಸಲ್ಲಿಸುವಂತೆ ಸೂಚಿಸಿದೆ ಎಂದು ವಿವರಿಸಿದೆ.