ಬಿಹಾರ | ಮಹಿಳೆ, ಆಕೆಯ ಗೆಳೆಯನ ಥಳಿಸಿ, ತಲೆ ಬೋಳಿಸಿ ಮೆರವಣಿಗೆ
ಸಾಂದರ್ಭಿಕ ಚಿತ್ರ
ಪಾಟ್ನಾ, ಆ. 6: ಗುಂಪೊಂದು ವಿವಾಹಿತ ಮಹಿಳೆ ಹಾಗೂ ಆಕೆಯ ಗೆಳೆಯನಿಗೆ ಥಳಿಸಿ, ಅವರ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಘಟನೆ ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಜೋಡಿ ಫಾಲ್ಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಾಂತದಲ್ಲಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಬಳಿಕ ಈ ಘಟನೆ ನಡೆದಿದೆ. ಗುಂಪಿನಿಂದ ದೌರ್ಜನ್ಯಕ್ಕೆ ಒಳಗಾದ ಇಬ್ಬರನ್ನೂ ಪೊಲೀಸರು ರಕ್ಷಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಶಿಖಾರ್ ಚೌಧರಿ ತಿಳಿಸಿದ್ದಾರೆ.
‘‘ಇಬ್ಬರೂ ವಿವಾಹವಾಗಿದ್ದು, ಮಕ್ಕಳಿದ್ದಾರೆ. ಇವರು ಕಳೆದ ಕೆಲವು ಸಮಯಗಳಿಂದ ಪ್ರೇಮ ಸಂಬಂಧದಲ್ಲಿದ್ದರು’’ ಎಂದು ಅವರು ತಿಳಿಸಿದ್ದಾರೆ.
‘‘ಸ್ಥಳೀಯ ಪಂಚಾಯತ್ ನಿರ್ದೇಶನದಂತೆ ಅವರಿಗೆ ಥಳಿಸಲಾಗಿದೆ ಹಾಗೂ ತಲೆಬೋಳಿಸಿ, ಮುಖಕ್ಕೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.
ತನಿಖೆ ನಡೆಯುತ್ತಿದೆ. ತಪ್ಪೆಸಗಿದವರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಚೌಧರಿ ತಿಳಿಸಿದ್ದಾರೆ.