×
Ad

ಸೌದಿ ಅರೇಬಿಯಾದೊಂದಿಗೆ ಭಾರತ ದ್ವಿಪಕ್ಷೀಯ ಹಜ್ ಒಪ್ಪಂದಕ್ಕೆ ಸಹಿ; 2026ಕ್ಕೆ 1.75 ಲಕ್ಷ ಯಾತ್ರಿಕರ ಕೋಟಾ ನಿಗದಿ: ವರದಿ

Update: 2025-11-10 11:23 IST
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಭಾರತ ಮತ್ತು ಸೌದಿ ಅರೇಬಿಯಾದ ನಡುವೆ ಹಜ್ 2026ರ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಭಾರತಕ್ಕೆ ಒಟ್ಟು 1,75,025 ಯಾತ್ರಿಕರ ಕೋಟಾವನ್ನು ನಿಗದಿಪಡಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನ. 7ರಿಂದ 9ರವರೆಗೆ ಸೌದಿ ಅರೇಬಿಯಾಕ್ಕೆ ಅಧಿಕೃತ ಭೇಟಿ ನೀಡಿದ್ದ ರಿಜಿಜು ಅವರು ರವಿವಾರ ಜಿದ್ದಾದಲ್ಲಿ ಸೌದಿ ಹಜ್ ಮತ್ತು ಉಮ್ರಾ ಸಚಿವ ಡಾ. ತೌಫಿಕ್ ಬಿನ್ ಫೌಝಾ ವನ್ ಅಲ್ ರಬಿಯಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದರು.

ಸಭೆಯ ವೇಳೆ ಹಜ್ 2026ರ ಸಿದ್ಧತೆಗಳ ಪ್ರಗತಿ, ಸಾರಿಗೆ ವ್ಯವಸ್ಥೆ, ವಸತಿ, ಆರೋಗ್ಯ ಹಾಗೂ ಯಾತ್ರಿಕರ ಯೋಗಕ್ಷೇಮಕ್ಕೆ ಸಂಬಂಧಿಸಿದ ಕ್ರಮಗಳ ಕುರಿತು ಚರ್ಚೆ ನಡೆಯಿತು. ಯಾತ್ರಿಕರಿಗೆ ಸುರಕ್ಷಿತ, ಸುಗಮ ಹಾಗೂ ಆಧ್ಯಾತ್ಮಿಕ ಸೌಕರ್ಯ ಒದಗಿಸುವುದು ಉಭಯ ರಾಷ್ಟ್ರಗಳ ಗುರಿಯಾಗಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.

ಭೇಟಿಯ ವೇಳೆ ರಿಜಿಜು ಅವರು ರಿಯಾದ್‌ ನ ಭಾರತೀಯ ರಾಯಭಾರ ಕಚೇರಿ ಹಾಗೂ ಜಿದ್ದಾದ ಭಾರತದ ಕಾನ್ಸುಲೇಟ್ ಅಧಿಕಾರಿಗಳೊಂದಿಗೆ ಆಂತರಿಕ ಪರಿಶೀಲನಾ ಸಭೆ ನಡೆಸಿ ಹಜ್ 2026ರ ಸಿದ್ಧತೆಗಳನ್ನು ವಿಮರ್ಶಿಸಿದರು. ಸೌದಿ ಅಧಿಕಾರಿಗಳ ಸಹಕಾರದಲ್ಲಿ ಭಾರತೀಯ ಮಿಷನ್ ಮತ್ತು ಕಾನ್ಸುಲೇಟ್‌ ತಂಡಗಳು ಮಾಡುತ್ತಿರುವ ಕಾರ್ಯವನ್ನು ಅವರು ಶ್ಲಾಘಿಸಿದರು.

ಅವರು ಜಿದ್ದಾ ಮತ್ತು ತಾಯಿಫ್‌ ನ ಪ್ರಮುಖ ಹಜ್ ಹಾಗೂ ಉಮ್ರಾ ಕೇಂದ್ರಗಳಿಗೆ ಭೇಟಿ ನೀಡಿ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸಿದರು. ಅಲ್ಲದೆ, ಸ್ಥಳೀಯ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು.

“ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವರೊಂದಿಗೆ ಸಭೆ ನಡೆಸಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 2026ರ ಹಜ್ ಯಾತ್ರೆಗೆ ಭಾರತಕ್ಕೆ 1,75,025 ಕೋಟಾವನ್ನು ನಿಗದಿಪಡಿಸಲಾಗಿದೆ. ಇದು ಭಾರತ–ಸೌದಿ ಸಂಬಂಧಗಳನ್ನು ಗಾಢಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ” ಎಂದು ಕಿರಣ್ ರಿಜಿಜು ಸಾಮಾಜಿಕ ಮಾಧ್ಯಮ X ನಲ್ಲಿ ತಿಳಿಸಿದ್ದಾರೆ.

“ಹಜ್ 2026ರ ಕುರಿತ ಚರ್ಚೆಗಳು ಯಾತ್ರಿಕರಿಗೆ ಸುರಕ್ಷಿತ, ಸುಗಮ ಹಾಗೂ ಆಧ್ಯಾತ್ಮಿಕ ಅನುಭವ ನೀಡುವ ಬದ್ಧತೆಯನ್ನು ಪುನರುಚ್ಚರಿಸಿವೆ,” ಎಂದೂ ಅವರು ಹೇಳಿದ್ದಾರೆ.

ಅಧಿಕೃತ ಪ್ರಕಟನೆಯ ಪ್ರಕಾರ, ಈ ಭೇಟಿ ಭಾರತ–ಸೌದಿ ಅರೇಬಿಯಾ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನದ ಪ್ರಮುಖ ಮೈಲಿಗಲ್ಲು ಆಗಿದ್ದು, ಸಾಂಸ್ಕೃತಿಕ ವಿನಿಮಯ, ಸಮುದಾಯ ಕಲ್ಯಾಣ ಮತ್ತು ಪರಸ್ಪರ ಸಹಕಾರದ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದೆ.

ಈ ಭೇಟಿಯಲ್ಲಿ ಸಚಿವ ರಿಜಿಜು ಅವರೊಂದಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಆರ್. ಮಹಾಜನ್ ಹಾಗೂ ಜಂಟಿ ಕಾರ್ಯದರ್ಶಿ (ಹಜ್) ರಾಮ್ ಸಿಂಗ್ ಸೇರಿದಂತೆ ಉನ್ನತ ಮಟ್ಟದ ನಿಯೋಗವಿತ್ತು. ಸೌದಿ ಹಜ್ ಮತ್ತು ಉಮ್ರಾ ಸಚಿವರ ಆಹ್ವಾನದ ಮೇರೆಗೆ ಈ ಭೇಟಿ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News