ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆ ಅಂಗೀಕಾರ
Photo : Sansad TV
ಹೊಸದಿಲ್ಲಿ: ಹೆಚ್ಚುತ್ತಿರುವ ಆನ್‌ಲೈನ್ ಗೇಮಿಂಗ್ ವ್ಯಸನ, ಹಣ ವರ್ಗಾವಣೆ ಹಾಗೂ ಆರ್ಥಿಕ ವಂಚನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿದ್ದ ಆನ್‌ಲೈನ್ ಗೇಮಿಂಗ್ ನ ಪ್ರಚಾರ ಮತ್ತು ನಿಯಂತ್ರಣ ಮಸೂದೆಗೆ ಲೋಕಸಭೆಯು ಬುಧವಾರ ಅಂತಿಮ ಅನುಮೋದನೆ ನೀಡಿದೆ.
ಮಂಗಳವಾರ ಕೆಳಮನೆಯಲ್ಲಿ ಮಂಡಿಸಲಾದ ಈ ಮಸೂದೆಯು, ಹಣದ ಮೇಲೆ ಆಡುವ ಆನ್‌ಲೈನ್ ಆಟಗಳನ್ನು ನಿಷೇಧಿಸುವುದರ ಜೊತೆಗೆ, ಅಂತಹ ಆಟಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಿದೆ.
ಇದಲ್ಲದೆ, ಬ್ಯಾಂಕುಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಇಂತಹ ಆನ್‌ಲೈನ್ ಹಣದ ಆಟಗಳಿಗೆ ಯಾವುದೇ ರೀತಿಯ ಹಣ ವರ್ಗಾವಣೆ ಅಥವಾ ವಹಿವಾಟು ನಡೆಸುವುದಕ್ಕೂ ಮಸೂದೆ ತಡೆಹಿಡಿದಿದೆ.
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಗೇಮಿಂಗ್ ಮೂಲಕ ಅನೇಕ ಯುವಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವುದರಿಂದ, ಸಮಾಜದಲ್ಲಿ ನಿಷೇಧಾತ್ಮಕ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ಈ ಮಸೂದೆಗೆ ಲೋಕಸಭೆಯಲ್ಲಿ ಬಹುಮತದ ಬೆಂಬಲ ಲಭಿಸಿದ್ದು, ಶೀಘ್ರದಲ್ಲೇ ರಾಜ್ಯಸಭೆಯಲ್ಲೂ ಅನುಮೋದನೆ ಪಡೆಯುವ ನಿರೀಕ್ಷೆಯಿದೆ.