×
Ad

ಗುಜರಾತ್: ಬಹುಕೋಟಿ ಬಿಟ್ ಕಾಯಿನ್ ಹಗರಣ; ಬಿಜೆಪಿಯ ಮಾಜಿ ಶಾಸಕ, ಹಿರಿಯ ಪೊಲೀಸ್ ಅಧಿಕಾರಿಗಳ ಸಹಿತ 14 ಮಂದಿಗೆ ಜೀವಾವಧಿ ಶಿಕ್ಷೆ

Update: 2025-08-29 20:55 IST

ಸಾಂದರ್ಭಿಕ ಚಿತ್ರ

ಅಹ್ಮದಾಬಾದ್, ಆ. 29: 2018ರ ಬಿಟ್ ಕಾಯಿನ್ ಸುಲಿಗೆ ಪ್ರಕರಣದಲ್ಲಿ ಅಹ್ಮದಾಬಾದ್‌ನ ನಗರ ಸೆಷನ್ಸ್ ನ್ಯಾಯಾಲಯ ಬಿಜೆಪಿ ಮಾಜಿ ಶಾಸಕ ನಳಿನ್ ಕೊಟಾಡಿಯ ಹಾಗೂ ಗುಜರಾತ್ ಪೊಲೀಸ್‌ನ ಹಿರಿಯ ಅಧಿಕಾರಿಗಳು ಸೇರಿದಂತೆ 14 ಮಂದಿಯನ್ನು ದೋಷಿಗಳು ಎಂದು ಘೋಷಿಸಿದೆ.

ಸೂರತ್ ಮೂಲದ ಬಿಲ್ಡರ್ ಹಾಗೂ ಕ್ರಿಪ್ಟೋಕರೆನ್ಸಿ ವ್ಯಾಪಾರಿ ಶೈಲೇಶ್ ಭಟ್ ಅವರ ಅಪಹರಣದೊಂದಿಗೆ ಆರಂಭವಾದ ಈ ಪ್ರಕರಣ ಗುಜರಾತ್‌ ನಲ್ಲಿ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ಬಹಿರಂಗಪಡಿಸಿತ್ತು.

2018ರಲ್ಲಿ ಗುಜರಾತ್ ಅನ್ನು ಬೆಚ್ಚಿ ಬೀಳಿಸಿದ ಈ ಬಹುಕೋಟಿಯ ಬಿಟ್ ಕಾಯಿನ್ ಪ್ರಕರಣದ ವಿಚಾರಣೆ ಕೊನೆಗೊಂಡಿದೆ. ಅಹ್ಮದಬಾದ್‌ನ ನಗರ ಸೆಷನ್ಸ್ ನ್ಯಾಯಾಲಯ ಈ ಪ್ರಕರಣದ 14 ಮಂದಿ ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದೆ. ಇವರಲ್ಲಿ ಬಿಜೆಪಿಯ ಮಾಜಿ ಶಾಸಕ ನಳಿನ್ ಕೊಟಾಡಿಯ, ಆಗಿನ ಅಮ್ರೇಲಿ ಎಸ್‌ಪಿ ಜಗದೀಶ್ ಪಟೇಲ್ ಹಾಗೂ ಆಗಿನ ಎಲ್‌ಸಿಬಿ ಪಿಐ ಅನಂತ್ ಪಟೇಲ್ ಸೇರಿದ್ದಾರೆ. ಇವರು

ಅಪಹರಣ ಹಾಗೂ ಸುಲಿಗೆ ಮೂಲಕ ತಪ್ಪೆಸಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಶೈಲೇಶ್ ಅವರ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಬಿಟ್ ಕಾಯಿನ್ ಹಗರಣಕ್ಕೆ ನಂಟು ಹೊಂದಿದ ಎಲ್ಲಾ ಆರೋಪಿಗಳನ್ನು ಬಂಧಿಸಿತ್ತು. ಅಹ್ಮದಾಬಾದ್‌ನ ನಗರ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದ ಎಸಿಬಿ ವಿಶೇಷ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಸರಕಾರ ಆರೋಪಿಗಳ ವಿರುದ್ಧ 172 ಸಾಕ್ಷಿಗಳನ್ನು ಹಾಜರುಪಡಿಸಿತ್ತು.

ಇದಕ್ಕೆ ತದ್ವಿರುದ್ಧವಾಗಿ ಪ್ರತಿವಾದಿ ಒಬ್ಬನೇ ಸಾಕ್ಷಿಯನ್ನು ಹಾಜರುಪಡಿಸಿತ್ತು. 92 ಸಾಕ್ಷಿಗಳು ತಿರುಗಿ ಬಿದ್ದಿದ್ದಾರೆ ಎಂದು ಹೇಳಲಾದರೂ ನ್ಯಾಯಾಲಯ ಆರೋಪಿಗಳ ವಿರುದ್ಧದ ಬಲವಾದ ಸಾಕ್ಷ್ಯ ಹಾಗೂ ವಾದವನ್ನು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

ಸುಮಾರು ಮೂರು ತಿಂಗಳ ಅಂತಿಮ ತೀವ್ರ ವಾದ-ಪ್ರತಿವಾದಗಳ ಬಳಿಕ ಸಂಚಲ ಮೂಡಿಸಿದ ಈ ಹಗರಣದ ಎಲ್ಲಾ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News