ಬಿಜೆಪಿಗೆ ಮಹಿಳಾ ಸಾರಥ್ಯ?: ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ನಿರ್ಮಲಾ ಸೀತಾರಾಮನ್, ಡಿ ಪುರಂದೇಶ್ವರಿ ಹೆಸರು ಮುಂಚೂಣಿಯಲ್ಲಿ!
ನಿರ್ಮಲಾ ಸೀತಾರಾಮನ್ (PTI) / ಡಿ ಪುರಂದೇಶ್ವರಿ (Facebook)
ಹೊಸದಿಲ್ಲಿ: ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಥಳೀಯ ಘಟಕಗಳಿಗೆ ಪಕ್ಷದ ಮುಖ್ಯಸ್ಥರನ್ನು ನೇಮಿಸಿದ ಬಿಜೆಪಿ ಈಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕಕ್ಕೆ ಕಸರತ್ತು ನಡೆಸುತ್ತಿದೆ.
ಜೆಪಿ ನಡ್ಡಾ ಅವರ ಅಧಿಕಾರವಧಿ 2023ರಲ್ಲಿ ಕೊನೆಗೊಂಡಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆ ಅವರ ಅಧಿಕಾರವಧಿಯನ್ನು ವಿಸ್ತರಿಸಲಾಗಿತ್ತು. ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿಗೆ ಬಿಜೆಪಿ ಮುಂದಾಗಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಪಕ್ಷಕ್ಕೆ ಮಹಿಳಾ ಅಧ್ಯಕ್ಷೆಯನ್ನು ನೇಮಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಪಕ್ಷದ ಉನ್ನತ ಹುದ್ದೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಂಧ್ರಪ್ರದೇಶದ ಬಿಜೆಪಿ ಘಟಕದ ಮಾಜಿ ಮುಖ್ಯಸ್ಥೆ ಡಿ ಪುರಂದೇಶ್ವರಿ ಮತ್ತು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಹೆಸರುಗಳು ಮುನ್ನಲೆಗೆ ಬಂದಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ನಿರ್ಮಲಾ ಸೀತಾರಾಮನ್ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗಿದೆ. ಅವರು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೊಂದಿಗೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದರು.
ಈ ಹಿಂದೆ ಬಿಜೆಪಿಯ ಆಂಧ್ರಪ್ರದೇಶ ಘಟಕದ ಮುಖ್ಯಸ್ಥೆಯಾಗಿದ್ದ ಡಿ ಪುರಂದೇಶ್ವರಿ ಹೆಸರು ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷೆ ಹುದ್ದೆಗೆ ಕೇಳಿ ಬಂದಿದೆ. ಅವರು ಇತ್ತೀಚೆಗೆ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಪ್ರಮುಖ ಯುರೋಪಿಯನ್ ದೇಶಗಳಲ್ಲಿ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ತಿಳಿಸುವ ಸರಕಾರದ ಆಪರೇಷನ್ ಸಿಂಧೂರ್ ನಿಯೋಗದ ಭಾಗವಾಗಿದ್ದರು.
ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರ ಹೆಸರು ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಮುಂಚೂಣಿಯಲ್ಲಿದೆ. 2021ರಲ್ಲಿ ಕೊಯಮತ್ತೂರು ದಕ್ಷಿಣದಲ್ಲಿ ಎಂಎನ್ಎಂ ಸಂಸ್ಥಾಪಕ ಕಮಲ್ ಹಾಸನ್ ಅವರನ್ನು ಸೋಲಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. 1993 ರಿಂದ ಬಿಜೆಪಿ ಪಕ್ಷದ ಸದಸ್ಯರಾಗಿರುವ ಅವರು 2022ರಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು.
ಪಕ್ಷದ ಬಲವರ್ದನೆ ದೃಷ್ಟಿಯಿಂದ ಮಹಿಳಾ ಮತದಾರರನ್ನು ಸೆಳೆಯಲು ಈ ಬಾರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಯೋರ್ವರನ್ನು ನೇಮಿಸಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗಿದೆ. ಒಂದು ವೇಳೆ ಬಿಜೆಪಿ ಈ ಬಾರಿ ಮಹಿಳಾ ಅಧ್ಯಕ್ಷೆಯನ್ನು ನೇಮಿಸಿದರೆ ಪಕ್ಷದ ಐತಿಹಾಸಿಕ ನಿರ್ಣಯವಾಗಲಿದೆ.