×
Ad

ಉತ್ತರ ಪ್ರದೇಶ | ದಲಿತ ಇಂಜಿನಿಯರ್‌ ಗೆ ಬೂಟಿನಿಂದ ಥಳಿಸಿದ ಬಿಜೆಪಿ ಕಾರ್ಯಕರ್ತನ ಬಂಧನ

Update: 2025-08-24 20:29 IST

PC : X 

ಬಲ್ಲಿಯಾ,ಆ.24: ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ದಲಿತ ಇಂಜಿನಿಯರ್ ಕಚೇರಿಗೆ ನುಗ್ಗಿ ಅವರನ್ನು ಬೂಟಿನಿಂದ ಥಳಿಸಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತನೋರ್ವನನ್ನು ಪೋಲಿಸರು ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊ ವಿದ್ಯುತ್ ಇಲಾಖೆಯ ಸೂಪರಿಂಟೆಂಡಿಂಗ್ ಇಂಜಿನಿಯರ್ ಲಾಲ್ ಸಿಂಗ್ ಎನ್ನುವವರನ್ನು ಬಿಜೆಪಿ ಕಾರ್ಯಕರ್ತ ಮುನ್ನಾ ಬಹಾದೂರ್ ಎಂಬಾತ ಥಳಿಸುತ್ತಿರುವುದನ್ನು ತೋರಿಸಿದೆ. ಶನಿವಾರ ಈ ಘಟನೆ ನಡೆದಿದೆ.

ಕೆಲವು ಅಪರಿಚಿತ ವ್ಯಕ್ತಿಗಳೊಂದಿಗೆ ಅನುಮತಿಯಿಲ್ಲದೆ ತನ್ನ ಕಚೇರಿಯನ್ನು ಪ್ರವೇಶಿಸಿದ್ದ ಮುನ್ನಾ ಬಹಾದೂರ್ ಜಾತಿ ನಿಂದನೆಗೈದು ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ, ಬೂಟಿನಿಂದ ಥಳಿಸಿದ್ದಾನೆ ಎಂದು ಲಾಲ್ ಸಿಂಗ್ ಪೋಲಿಸರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಹಲ್ಲೆಕೋರರು ಕೆಲವು ಮಹತ್ವದ ಕಡತಗಳನ್ನು ಹರಿದುಹಾಕಿದ್ದಾರೆ ಮತ್ತು ಪೋಲಿಸ್ ದೂರು ಸಲ್ಲಿಸಿದರೆ ಸಿಂಗ್ ಮತ್ತು ಅವರ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಹೇಳಲಾಗಿದೆ.

ಸಿಂಗ್ ಮತ್ತು ಆರೋಪಿಗಳ ನಡುವೆ ತೀವ್ರ ವಾಗ್ವಾದದ ಬಳಿಕ ಗುಂಪು ಸಿಂಗ್ ಅವರನ್ನು ಥಳಿಸುತ್ತಿರುವುದನ್ನು ವೀಡಿಯೊ ತೋರಿಸಿದೆ.

ಎಸ್‌ಪಿ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ‘ಅಧಿಕಾರದ ಅರ್ಥ ಹಿಂಸೆ ನೀಡುವುದು ಎಂದಲ್ಲ’ ಎಂಬ ಸಂದೇಶದೊಂದಿಗೆ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಬಂಧನಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುನ್ನಾ ಬಹಾದೂರ್, ತನ್ನ ಪ್ರದೇಶದಲ್ಲಿಯ ವಿದ್ಯುತ್ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಲು ತಾನು ಲಾಲ್ ಸಿಂಗ್ ಕಚೇರಿಗೆ ತೆರಳಿದ್ದೆ,ಅವರು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ತನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ಮುನ್ನಾ ಬಹಾದೂರ್ ಮತ್ತು ಇತರರ ವಿರುದ್ಧ ಬಿಎನ್‌ಎಸ್ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು,ತನಿಖೆಯು ಪ್ರಗತಿಯಲ್ಲಿದೆ ಎಂದು ಎಸ್‌ಪಿ ಓಂವೀರ್ ಸಿಂಗ್ ತಿಳಿಸಿದರು.

ಮುನ್ನಾ ಬಹಾದೂರ್ ಬಿಜೆಪಿ ಕಾರ್ಯಕರ್ತ ಮತ್ತು ಪಕ್ಷದ ಮಾಜಿ ಪದಾಧಿಕಾರಿ ಎನ್ನುವುದನ್ನು ದೃಢಪಡಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಮಿಶ್ರಾ ಅವರು,ಈ ವಿಷಯದಲ್ಲಿ ಬಿಜೆಪಿಯ ಕ್ರಮವನ್ನು ನಿರ್ಧರಿಸಲು ಸಾರಿಗೆ ಸಚಿವ ದಯಾಶಂಕರ ಸಿಂಗ್ ಮತ್ತು ಪಕ್ಷದ ಇತರ ನಾಯಕರೊಂದಿಗೆ ತಾನು ಮಾತುಕತೆ ನಡೆಸುತ್ತಿದ್ದೇನೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News