ಆಡಿಯೊ ಬುಕ್‌ಗಾಗಿ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ದಲಾಯಿ ಲಾಮಾ
ದಲಾಯಿ ಲಾಮಾ | Photo Credit : PTI
ಹೊಸದಿಲ್ಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಅವರು ತನ್ನ ‘ಮೆಡಿಟೇಷನ್ಸ್:ದಿ ರಿಫ್ಲೆಕ್ಷನ್ಸ್ ಆಫ್ ಹೀಸ್ ಹೋಲಿನೆಸ್ ದಿ ದಲಾಯಿ ಲಾಮಾ’ ಆಡಿಯೊ ಬುಕ್‌ಗಾಗಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದು, ಇದು 68ನೇ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಗಮನಾರ್ಹ ಘಳಿಗೆಯಾಗಿ ಗುರುತಿಸಲ್ಪಟ್ಟಿದೆ.
ದಲಾಯಿ ಲಾಮಾರ ಆಲ್ಬಮ್ ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೇತಾಂಜಿ ಬ್ರೌನ್ ಜಾಕ್ಸನ್, ಕ್ಯಾಥಿ ಗಾರ್ವರ್ ಮತ್ತು ಫ್ಯಾಬ್ ಮೊರ್ವಾನ್ ಸೇರಿದಂತೆ ವಿವಿಧ ಕ್ಷೇತ್ರಗಳ ನಾಮನಿರ್ದೇಶಿತರನ್ನು ಹಿಂದಿಕ್ಕಿ ಸ್ಪೋಕನ್ ವರ್ಡ್ ವಿಭಾಗದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ.
ದಲಾಯಿ ಲಾಮಾ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಗಾಯಕ-ಗೀತ ರಚನೆಕಾರ ರಫಸ್ ವೇನ್‌ರೈಟ್ ಅವರು ದಲಾಯಿ ಲಾಮಾ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ದಲಾಯಿ ಲಾಮಾರ ಈ ಆಲ್ಬಂ ನಿರ್ಮಾಣದಲ್ಲಿ ಖ್ಯಾತ ಸರೋದ್ ವಾದಕ ಅಮ್ಜದ್ ಅಲಿ ಖಾನ್,ಅವರ ಪುತ್ರರಾದ ಅಮಾನ್ ಅಲಿ ಬಂಗಾಶ್ ಮತ್ತು ಅಯಾನ್ ಅಲಿ ಬಂಗಾಶ ಸಹಕರಿಸಿದ್ದು, ಶಾಂತಿ,ಅನುಕಂಪ,ದಯೆ ಮತ್ತು ಭರವಸೆಯ ಸಾರ್ವತ್ರಿಕ ಮೌಲ್ಯಗಳನ್ನು ಬಿಂಬಿಸುವ ಪದಗಳು ಮತ್ತು ಸಂಗೀತ ಆಲ್ಬಮ್‌ನಲ್ಲಿ ಹದವಾಗಿ ಬೆರೆತುಕೊಂಡಿವೆ.
ಪ್ರಶಸ್ತಿಯನ್ನು ಗೆದ್ದ ಬಳಿಕ ನೀಡಿದ ಹೇಳಿಕೆಯಲ್ಲಿ ದಲಾಯಿ ಲಾಮಾ, ‘ಈ ಗೌರವವನ್ನು ನಾನು ಕೃತಜ್ಞತೆ ಮತ್ತು ನಮ್ರತೆಯೊಂದಿಗೆ ಸ್ವೀಕರಿಸುತ್ತೇನೆ. ನಾನು ಇದನ್ನು ವೈಯಕ್ತಿಕ ವಿಷಯವನ್ನಾಗಿ ನೋಡುವುದಿಲ್ಲ,ನಾವು ಹಂಚಿಕೊಂಡಿರುವ ಸಾರ್ವತ್ರಿಕ ಜವಾಬ್ದಾರಿಗೆ ಸಿಕ್ಕ ಮಾನ್ಯತೆಯಾಗಿ ಪರಿಗಣಿಸುತ್ತೇನೆ. ಎಂಟು ಶತಕೋಟಿ ಮಾನವರ ಸಾಮೂಹಿಕ ಯೋಗಕ್ಷೇಮಕ್ಕೆ ಶಾಂತಿ,ಅನುಕಂಪ,ನಮ್ಮ ಪರಿಸರದ ಬಗ್ಗೆ ಕಾಳಜಿ ಹಾಗೂ ಮಾನವೀಯ ಏಕತೆಯ ತಿಳುವಳಿಕೆ ಅತ್ಯಗತ್ಯ ಎನ್ನುವುದು ನನ್ನ ನಿಜವಾದ ನಂಬಿಕೆಯಾಗಿದೆ. ಈ ಗ್ರ್ಯಾಮಿ ಗೌರವವು ಈ ಸಂದೇಶಗಳನ್ನು ವ್ಯಾಪಕವಾಗಿ ಹರಡಲು ನೆರವಾಗಲಿದೆ,ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’ ಎಂದು ತಿಳಿಸಿದ್ದಾರೆ.
ದಲಾಯಿ ಲಾಮಾ ಈ ವರ್ಷ ಮೊದಲ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದವರ ಪಟ್ಟಿಗೆ ಸೇರಿಕೊಂಡಿದ್ದು, ಕೆ-ಪಾಪ್ ಕಲಾವಿದರು ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್ ಕೂಡ ಈ ಪಟ್ಟಿಯಲ್ಲಿದ್ದಾರೆ.