ಜಿ.ಪಂ. ಚುನಾವಣೆ | ಶಿವಸೇನೆ ಗೆದ್ದರೆ ಅನುದಾನ ಕಡಿತಗೊಳಿಸುತ್ತೇವೆ: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಬೆದರಿಕೆ
ನಿತೇಶ್ ರಾಣೆ | Photo Credit : PTI
ಮುಂಬೈ: ಮುಂಬರುವ ಜಿಲ್ಲಾ ಪರಿಷತ್ ಹಾಗೂ ಪಂಚಾಯತಿ ಸಮಿತಿ ಚುನಾವಣೆಯಲ್ಲಿ ಶಿವಸೇನೆ (ಉದ್ಧವ್ ಬಣ) ಅಭ್ಯರ್ಥಿಗಳು ಗೆಲುವು ಸಾಧಿಸಿದಲ್ಲಿ, ಅವರಿಗೆ ಮಂಜೂರು ಮಾಡಬೇಕಾದ ಅಭಿವೃದ್ಧಿ ನಿಧಿಗಳನ್ನು ತಡೆ ಹಿಡಿಯುತ್ತೇವೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಬೆದರಿಕೆ ಒಡ್ಡಿದ್ದಾರೆ.
ರವಿವಾರ ಸಿಂಧುದುರ್ಗ ಜಿಲ್ಲೆಯ ಕಂಕ್ಲಾವಿಯಾ ಪೋಂಡಾ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ನಮ್ಮ ಪಕ್ಷದ ಚಿಹ್ನೆಯನ್ನು ನೋಡಿದ ಬಳಿಕವೇ ಅನುದಾನ ಬಿಡುಗಡೆ ಮಾಡುತ್ತೇವೆ. ಕಮಲ ಅಥವಾ ಬಿಲ್ಲು ಮತ್ತು ಬಾಣ (ಬಿಜೆಪಿ ಮತ್ತು ಶಿವಸೇನೆಯ ಚುನಾವಣಾ ಚಿಹ್ನೆಗಳು) ಕಂಡರೆ ತಕ್ಷಣವೇ ಹಣವನ್ನು ಮಂಜೂರು ಮಾಡಲಾಗುತ್ತದೆ. ಒಂದು ವೇಳೆ ತಪ್ಪಾಗಿ ಪಂಜಿನ ಚಿಹ್ನೆ (ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ) ಕಂಡು ಬಂದರೆ, ಈಗಾಗಲೇ ಮಂಜೂರಾಗಿರುವ ಅನುದಾನವನ್ನೂ ಸಹ ಹಿಂಪಡೆಯುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಎಲ್ಲ ಸರಪಂಚರು ತಮ್ಮ ಗ್ರಾಮ ಪಂಚಾಯತ್ ಗಳನ್ನು ನಮಗೆ ಹಸ್ತಾಂತರಿಸಬೇಕೆಂದು ನಾವು ಸ್ಪಷ್ಟವಾಗಿ ತಿಳಿಸಿದ್ದೆವು. ಅವರಿಗೆ ಒಂದು ರೂಪಾಯಿಯ ಅನುದಾನವೂ ದೊರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದೆವು. ಹೀಗಾಗಿಯೇ ಎಲ್ಲ ಸರಪಂಚರೂ ಲಗುಬಗೆಯಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಯಾದರು” ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಪರಿಷತ್ ಮತ್ತು ಪಂಚಾಯತಿ ಸಮಿತಿ ಚುನಾವಣೆಗಳು ಏಕಪಕ್ಷೀಯವಾಗುತ್ತಿವೆ ಹಾಗೂ ಮತದಾರರು ಪ್ರತಿಪಕ್ಷಗಳನ್ನು ಬೆಂಬಲಿಸುವ ಅಗತ್ಯವನ್ನು ಪ್ರಶ್ನಿಸುತ್ತಿದ್ದಾರೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಸಂಸದ ನಾರಾಯಣ ರಾಣೆ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತಿವೆ ಹಾಗೂ ಮುಂದಿನ ಐದು ವರ್ಷಗಳ ಕಾಲ ಸಿಂಧುದುರ್ಗ ಜಿಲ್ಲೆ ಅವರ ನಾಯಕತ್ವದಲ್ಲೇ ಉಳಿಯಲಿದೆ ಎಂದು ನಿತೇಶ್ ರಾಣೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಚುನಾವಣೆಯ ನಂತರ ಶಿವಸೇನೆಯ ನಾಯಕರು ನಮ್ಮ ಬಳಿಗೆ ಅನುದಾನಕ್ಕಾಗಿ ಬರಬೇಕಾಗುತ್ತದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಫೆಬ್ರವರಿ 7ರಂದು 12 ಜಿಲ್ಲಾ ಪರಿಷತ್ ಮತ್ತು 125 ಪಂಚಾಯತಿ ಸಮಿತಿಗಳಿಗೆ ಚುನಾವಣೆ ನಡೆಯಲಿದ್ದು, ಫೆಬ್ರವರಿ 9ರಂದು ಮತ ಎಣಿಕೆ ನಡೆಯಲಿದೆ.