2026ರಲ್ಲಿ ಇತರ ರಾಜ್ಯಗಳೊಂದಿಗೆ ಪಶ್ಚಿಮ ಬಂಗಾಳ ಚುನಾವಣೆಯನ್ನು ಸೇರಿಸಬೇಡಿ: ಚುನಾವಣಾ ಆಯೋಗಕ್ಕೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಗ್ರಹ
ಸುವೇಂದು ಅಧಿಕಾರಿ | PTI
ಕೋಲ್ಕತ್ತಾ: 2026ರಲ್ಲಿ ನಡೆಯಬೇಕಿರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಇತರ ರಾಜ್ಯಗಳೊಂದಿಗೆ ಪಶ್ಚಿಮ ಬಂಗಾಳ ಚುನಾವಣೆಯನ್ನು ಸೇರ್ಪಡೆ ಮಾಡಕೂಡದು ಎಂದು ಶುಕ್ರವಾರ ಚುನಾವಣಾ ಆಯೋಗವನ್ನು ಆಗ್ರಹಿಸಿರುವ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ವಿಧಾನಸಭಾ ವಿಪಕ್ಷ ನಾಯಕ ಸುವೇಂದು ಅಧಿಕಾರಿ, “ಗುರುವಾರ ಆಲಿಪುರ್ದೂರ್ ನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಮೇಲೆ ಟಿಎಂಸಿ ಬೆಂಬಲಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ” ಎಂದು ದೂರಿದರು.
ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರಧಾನಿ ಮೋದಿ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಟಿಎಂಸಿ ಬೆಂಬಲಿತ ಗೂಂಡಾಗಳು 34 ವಾಹನಗಳನ್ನು ಧ್ವಂಸಗೊಳಿಸಿದ್ದು, 22 ಮಂದಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಅವರು ಆಪಾದಿಸಿದರು.
“ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಟಿಎಂಸಿ ನಾಯಕರು ಬಳಸುತ್ತಿರುವ ಭಾಷೆ ಬೆದರಿಕೆ ಹಾಗೂ ಅಪ್ರಜಾಸತ್ತಾತ್ಮಕ ಧಾಟಿಯದ್ದಾಗಿದೆ. ಇಂತಹ ಸನ್ನಿವೇಶಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯಲು ಸಾಧ್ಯವಿಲ್ಲ” ಎಂದು ಹೇಳಿದ ಸುವೇಂದು ಅಧಿಕಾರಿ, 2026ರಲ್ಲಿ ನಡೆಯಬೇಕಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಮುಂದೆ ಚುನಾವಣೆ ನಡೆಯಬೇಕಿರುವ ಇನ್ನಿತರ ರಾಜ್ಯಗಳಾದ ಅಸ್ಸಾಂ, ಬಿಹಾರ ಅಥವಾ ಕೇರಳ ರಾಜ್ಯಗಳೊಂದಿಗೆ ಸೇರ್ಪಡೆ ಮಾಡಬಾರದು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದರು.