×
Ad

ವಿಶಾಖಪಟ್ಟಣಂ ಬಂದರಿನಲ್ಲಿ ದೋಣಿಗಳು ಸುಟ್ಟು ಭಸ್ಮ ಪ್ರಕರಣ ; 10 ಮಂದಿ ಪೊಲೀಸ್ ವಶಕ್ಕೆ

Update: 2023-11-21 21:33 IST

Photo: NDTV

ವಿಜಯವಾಡ: ವಿಶಾಖಪಟ್ಟಣಂ ಬಂದರಿನಲ್ಲಿ 36 ದೋಣಿಗಳು ಸುಟ್ಟು ಭಸ್ಮವಾದ ಹಾಗೂ ಇತರ ದೋಣಿಗಳಿಗೆ ಹಾನಿ ಉಂಟಾದ ಅಗ್ನಿ ಅವಘಡದ ತನಿಖೆಯನ್ನು ತೀವ್ರಗೊಳಿಸಿರುವ ವಿಶಾಖಪಟ್ಟಣಂ ನಗರ ಪೊಲೀಸರು 10 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ವಿಶಾಖಪಟ್ಟಣಂ ಬಂದರಿನಲ್ಲಿ ದೋಣಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮೊದಲಿಗೆ ಕರೆ ಸ್ವೀಕರಿಸಿದ್ದ ಯೂಟ್ಯೂಬರ್ ನನ್ನು ಕೂಡ ಪ್ರಶ್ನಿಸಲಾಗುತ್ತಿದೆ. ದೋಣಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭ ಯುಟ್ಯೂಬರ್ ನಗರದ ಹೊಟೇಲ್ ಒಂದರಲ್ಲಿ ಇದ್ದರು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಅಗ್ನಿ ಅವಘಡ ಸಂಭವಿಸುವ ಕೆಲವು ನಿಮಿಷಗಳ ಮುನ್ನ ಅವರು ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕಿತ ವ್ಯಕ್ತಿಗಳ ಚಲನವಲನವನ್ನು ಪತ್ತೆ ಹಚ್ಚಲು ಪೊಲೀಸರು ಬಂದರಿನ ಸುತ್ತಮುತ್ತ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ವಿವಿಧ ಪಕ್ಷಗಳ ಉನ್ನತ ನಾಯಕರು ಬಂದರಿಗೆ ಭೇಟಿ ನೀಡಿದ್ದು, ದೋಣಿಗಳ ಮಾಲಕರಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ.

ಈ ನಡುವೆ ಬೆಂಕಿ ಹುಟ್ಟಿಕೊಳ್ಳಲು ಕಾರಣವೇನೆಂದು ಪತ್ತೆ ಹಚ್ಚಲು ಬಹು ಇಲಾಖೆಗಳ ತಂಡ ತನಿಖೆ ನಡೆಸಲಿದೆ.

ವಿಶಾಖಪಟ್ಟಣ ಬಂದರಿನಲ್ಲಿ ಸಂಭವಿಸಿದ ಅಗ್ನಿ ಅವಘಢದಲ್ಲಿ ಸುಟ್ಟು ಭಸ್ಮವಾದ ದೋಣಿಗಳ ಮಾಲಕರಿಗೆ ಶೇ. 80ರಷ್ಟು ಪರಿಹಾರ ನೀಡಲಾಗುವುದು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಸೋಮವಾರ ಪ್ರಕಟಿಸಿದ್ದಾರೆ.

ಮಾನವೀಯತೆ ನೆಲೆಯಲ್ಲಿ ಅಗ್ನಿ ಅವಘಡದಲ್ಲಿ ಉಂಟಾದ ನಷ್ಟದ ಶೇ. 80 ಅನ್ನು ಮೀನುಗಾರರಿಗೆ ಪಾವತಿಸಿ. ಇದರಿಂದ ಅವರು ನಷ್ಟವನ್ನು ಸರಿದೂಗಿಸಲು ಹಾಗೂ ಮತ್ತೆ ಮೀನುಗಾರಿಕೆ ಚಟುವಟಿಕೆಗಳನ್ನು ಆತ್ಮ ವಿಶ್ವಾಸದಿಂದ ಪುನಾರಂಭಿಸಲು ಸಾಧ್ಯವಾಗುತ್ತದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರಕಾರ ಮೀನುಗಾರರ ಬೆಂಬಲಕ್ಕೆ ನಿಲ್ಲಬೇಕು ಎಂದು ರೆಡ್ಡಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News