ಎಬಿವಿಪಿ ಒತ್ತಡ: ಉತ್ತರಾಖಂಡ ವಿವಿಯಲ್ಲಿಯ ಪುಸ್ತಕ ಮೇಳ ರದ್ದು
Photo credit: newsclick.in
ಡೆಹ್ರಾಡೂನ್: ಉತ್ತರಾಖಂಡದ ಪೌಡಿ ಗಡ್ವಾಲ್ ಜಿಲ್ಲೆಯ ಕೇಂದ್ರೀಯ ವಿವಿಯಲ್ಲಿ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ಅನುಮತಿಯನ್ನು ಹಿಂದೆಗೆದುಕೊಳ್ಳುವಂತೆ ಎಬಿವಿಪಿ ಆಡಳಿತದ ಮೇಲೆ ಒತ್ತಡ ಹೇರಿದ ಬಳಿಕ ರದ್ದುಗೊಳಿಸಲಾಗಿದೆ ಎಂದು The Indian Express ಸುದ್ದಿಸಂಸ್ಥೆಯು ವರದಿ ಮಾಡಿದೆ.
ಕ್ರಿಯೇಟಿವ್ ಉತ್ತರಾಖಂಡ ಎಂಬ ಸಂಘಟನೆಯು ಜನವರಿಯಲ್ಲಿ ಸರಕಾರಿ ಬಾಲಕಿಯರ ಇಂಟರ್ ಕಾಲೇಜಿನಲ್ಲಿ ‘ಕಿತಾಬ್ ಕೌತಿಕ್’ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಿತ್ತು,ಆದರೆ ಹಿಂದುತ್ವ ಗುಂಪು ಅದನ್ನು ವಿರೋಧಿಸಿತ್ತು.ಹೀಗಾಗಿ ಕಾರ್ಯಕ್ರಮವನ್ನು ಫೆ.15-16ಕ್ಕೆ ಮುಂದೂಡಲಾಗಿತ್ತು ಮತ್ತು ಶ್ರೀನಗರ ಪಟ್ಟಣದ ಹೇಮವತಿ ನಂದನ ಬಹುಗುಣ ಗಡ್ವಾಲ್ ವಿವಿಯ ಡೀನ್‌ರಿಂದ ಅನುಮತಿಯನ್ನು ಪಡೆದುಕೊಳ್ಳಲಾಗಿತ್ತು ಎಂದು ಸಂಘಟಕರಲ್ಲೋರ್ವರಾದ ಹೇಮ್ ಪಂತ್ ತಿಳಿಸಿದರು.
‘ಆದರೆ ನಂತರ ವಿವಿಯ ಆವರಣದಲ್ಲಿ ಪುಸ್ತಕಮೇಳವನ್ನು ನಡೆಸಲು ಸಾಧ್ಯವಿಲ್ಲ ಎಂದು ನಮಗೆ ತಿಳಿಸಲಾಗಿತ್ತು. ಪಟ್ಟಣದ ಮೈದಾನದಲ್ಲಿ ಕಾರ್ಯಕ್ರಮವನ್ನು ನಡೆಸಲು ಅನುಮತಿಗಾಗಿ ರಾಮಲೀಲಾ ಸಮಿತಿಯನ್ನು ಸಂಪರ್ಕಿಸಿದ್ದೆವು,ಆದರೆ ಲಿಖಿತ ಅನುಮತಿಯ ಹೊರತಾಗಿಯೂ ಆರೆಸ್ಸೆಸ್ ಅದೇ ದಿನ ಅಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದೆ’ ಎಂದರು. ನಂತರ ಸಂಘಟಕರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.
‘ನಾವು ಕಾರ್ಯಕ್ರಮವನ್ನು ನಡೆಸಿದರೆ ಪುಸ್ತಕಗಳನ್ನು ಸುಡುವುದಾಗಿ ಗುಂಪುಗಳು ನಮಗೆ ಬೆದರಿಕೆಯೊಡ್ಡಿದ್ದವು. ನಾವು ಕಮ್ಯುನಿಸ್ಟ್ ಸಾಹಿತ್ಯವನ್ನು ಹೊಂದಿದ್ದೇವೆ ಎಂದು ಅವರು ಆರೋಪಿಸಿದ್ದರು. ಇದು ವಿವಿಧ ವಿಷಯಗಳ ಕುರಿತು 70,000ಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿರುವ ಪುಸ್ತಕ ಮೇಳವಾಗಿದ್ದು,ಸಾಮಾಜಿಕ ಸಮಸ್ಯೆಗಳ ಕುರಿತು ಮಾತನಾಡುವ ಜಾನಪದ ಕಲಾವಿದ ನರೇಂದ್ರಸಿಂಗ್ ನೇಗಿ ಅವರನ್ನು ಆಹ್ವಾನಿಸಲೂ ನಾವು ಯೋಜಿಸಿದ್ದೆವು. ಇದೂ ಆರೆಸ್ಸೆಸ್‌ಗೆ ಪಥ್ಯವಾಗಿರಲಿಲ್ಲ’ ಎಂದು ಪಂತ್ ತಿಳಿಸಿದರು.
‘ಎಬಿವಿಪಿ ವಿದ್ಯಾರ್ಥಿ ಸಂಘವು ಆವರಣದಲ್ಲಿ ಪುಸ್ತಕ ಮೇಳ ಮತ್ತು ಕಾರ್ಯಕ್ರಮಕ್ಕೆ ವಿರೋಧವನ್ನು ವ್ಯಕ್ತಪಡಿಸಿತ್ತು. ಪುಸ್ತಕಗಳು ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡುತ್ತವೆ ಎಂದು ಅದು ಕಳವಳಗೊಂಡಿತ್ತು. ಹೀಗಾಗಿ ನಾವು ಪುಸ್ತಕ ಮೇಳಕ್ಕೆ ನೀಡಿದ್ದ ಅನುಮತಿಯನ್ನು ಪುನರ್‌ಪರಿಶೀಲಿಸಬೇಕಾಯಿತು ’ಎಂದು ಡೀನ್‌ರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
‘ವಿವಿಯಲ್ಲಿ ಪರೀಕ್ಷೆಗಳು ನಡೆಯುತ್ತಿವೆ,ನಾವು ಸಹ ಕಾರ್ಯಕ್ರಮವೊಂದನ್ನು ಯೋಜಿಸಿದ್ದೆವು,ಆದರೆ ಪರೀಕ್ಷೆಗಳಿಗೆ ಅಡ್ಡಿಯಾಗಬಾರದು ಎಂದು ನಾವು ಬಯಸಿದ್ದೆವು’ ಎಂದು ಹೇಳಿದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಸ್ವಂತ್ ಸಿಂಗ್ ರಾಣಾ,‘ನಾವು ಆಡಳಿತದೊಂದಿಗೆ ಚರ್ಚಿಸಿದ ಬಳಿಕ ವಿವಿಯು ಪುಸ್ತಕ ಮೇಳಕ್ಕೆ ಅನುಮತಿಯನ್ನು ಹಿಂದೆಗೆದುಕೊಂಡಿದೆ ’ಎಂದರು.