×
Ad

ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ: ಆರೋಪಿಯ ಮನೆ ನಿರ್ಮಾಣಕ್ಕೆ ಬ್ರಾಹ್ಮಣ ಸಮಾಜದಿಂದ ದೇಣಿಗೆ ಅಭಿಯಾನ

Update: 2023-07-11 19:35 IST

Photo : PTI

ಭೋಪಾಲ್: ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ನಡೆಸಿದ ಆರೋಪಿಯ ಮನೆ ಪುನರ್‌ನಿರ್ಮಾಣ ಮಾಡಲು ಮಧ್ಯಪ್ರದೇಶದ 'ಬ್ರಾಹ್ಮಣ ಸಮಾಜ'ವು ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದೆ ಎಂದು timesofIndia.com ವರದಿ ಮಾಡಿದೆ.

ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜಿಸಿ, ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಆರೋಪಿ ಪ್ರವೇಶ್ ಶುಕ್ಲಾನ ಮನೆಯನ್ನು ಅಕ್ರಮ ಕಟ್ಟಡ ಎಂದು ಆರೋಪಿಸಿ ಸ್ಥಳೀಯಾಡಳಿತವು ಧ್ವಂಸಗೊಳಿಸಿತ್ತು. ಆ ಮನೆಯಲ್ಲಿ ಶುಕ್ಲಾ ತನ್ನ ಪತ್ನಿ, ಮೂರು ವರ್ಷದ ಮಗಳು ಮತ್ತು ಪೋಷಕರೊಂದಿಗೆ ವಾಸಿಸುತ್ತಿದ್ದರು.

ಮನೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಬ್ರಾಹ್ಮಣ ಸಮಾಜವು ಸ್ಥಳೀಯಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಕುಬ್ರಿ ಗ್ರಾಮದಲ್ಲಿರುವ ಮನೆಯನ್ನು ತನ್ನ ಅಜ್ಜಿ ನಿರ್ಮಿಸಿದ್ದು, ಪ್ರವೇಶ್ ಅಥವಾ ಅವರ ತಂದೆಯ ಹೆಸರಿನಲ್ಲಿಲ್ಲ ಎಂದು ಅವರ ಪತ್ನಿ ಕಾಂಚನ ಹೇಳಿದ್ದಾರೆ.

ಈಗ, ಮಳೆಗಾಲದಲ್ಲಿ ಕುಟುಂಬವು ನಿರಾಶ್ರಿತವಾಗಿದ್ದು, ಇತರರ ಮೇಲೆ ಅವಲಂಬಿತವಾಗಿದೆ ಎಂದು ಬ್ರಾಹ್ಮಣ ಸಮಾಜವು ಹೇಳಿದೆ. ಪ್ರವೇಶ್ ಅವರ ತಂದೆ ರಮಾಕಾಂತ್ ಶುಕ್ಲಾ ಅವರ ಬ್ಯಾಂಕ್‌ ಖಾತೆ ಸಂಖ್ಯೆ ಸಮುದಾಯದ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದು, ರಾಜ್ಯಾದ್ಯಂತ ಇರುವ ಸಮುದಾಯದ ಸದಸ್ಯರು ಹಣ ಕಳುಹಿಸಲು ಪ್ರಾರಂಭಿಸಿದ್ದಾರೆ ಎಂದು ವರದಿ ಹೇಳಿದೆ.

‘ಧ್ವಂಸಗೊಂಡ ಕುಟುಂಬದ ಮನೆಯನ್ನು ಸಂಘಟನೆಯೇ ನಿರ್ಮಿಸಿಕೊಡಲಿದೆʼ ಎಂದು ಅಖಿಲ ಭಾರತೀಯ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ಪುಷ್ಪೇಂದ್ರ ಮಿಶ್ರಾ ಹೇಳಿದ್ದಾರೆ.

"ಮನೆಯು ಪ್ರವೇಶ್‌ ಶುಕ್ಲಾ ಹೆಸರಿನಲ್ಲಿ ಇರಲಿಲ್ಲ. ನಾವು ಆರಂಭದಲ್ಲಿ 51,000 ರೂ. ಸಹಾಯವನ್ನು ನೀಡಿದ್ದೇವೆ. ಕುಟುಂಬದ ಮುಖ್ಯಸ್ಥರ ಖಾತೆ ಸಂಖ್ಯೆಯನ್ನು ನಮ್ಮ ಸಂಸ್ಥೆಯಾದ್ಯಂತ ಪ್ರಸಾರ ಮಾಡಲಾಗಿದೆ. ಜನರು ಮನೆ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ಆರೋಪಿಯ ಅಪರಾಧದಲ್ಲಿ ಅವರ ಕುಟುಂಬದ ಕೈವಾಡ ಇಲ್ಲದ ಕಾರಣ ನಾವು ಕುಟುಂಬಕ್ಕೆ ಎಲ್ಲ ಸಹಾಯವನ್ನು ಮಾಡುತ್ತಿದ್ದೇವೆ" ಎಂದು ಪುಷ್ಪೇಂದ್ರ ಮಿಶ್ರಾ ಹೇಳಿದ್ದಾರೆ.

"ಮನೆ ಧ್ವಂಸಗೊಳಿಸಿರುವ ಪ್ರಕರಣದ ಕುರಿತಂತೆ ಬ್ರಾಹ್ಮಣ ಸಮಾಜವು ಮಧ್ಯಪ್ರದೇಶದ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸುತ್ತದೆ, ಯಾವ ಕಾನೂನಿನ ಅಡಿಯಲ್ಲಿ ಸರ್ಕಾರವು ಕುಟುಂಬದ ಕಾನೂನುಬದ್ಧ ಮನೆಯನ್ನು ನೆಲಸಮ ಮಾಡಿದೆ ಎಂದು ಪ್ರಶ್ನಿಸುತ್ತೇವೆ" ಎಂದು ಮಿಶ್ರಾ TOI ಗೆ ತಿಳಿಸಿದ್ದಾರೆ.

"ಸಮಾಜದ ಸದಸ್ಯರು ನಮಗೆ 51,000 ರೂ.ಗಳನ್ನು ನೀಡಿದ್ದಾರೆ. ಹಲವಾರು ಜನರು ನನ್ನ ಖಾತೆಗೆ ಹಣವನ್ನು ಹಾಕುತ್ತಿದ್ದಾರೆ" ಎಂದು ರಮಾಕಾಂತ್ ಶುಕ್ಲಾ TOI ಗೆ ತಿಳಿಸಿದ್ದಾರೆ.

"ಅವನು ನನ್ನ ಮಗ, ಆದರೆ ನಾನು ಕಾನೂನು ಪಾಲಿಸುವ ನಾಗರಿಕ. ನನ್ನ ಮಗನ ವಿರುದ್ಧ ಸಂವಿಧಾನದ ಪ್ರಕಾರ ಯಾವುದೇ ಕಾನೂನು ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ ನಮ್ಮ ಮನೆಯನ್ನು ಏಕೆ ಧ್ವಂಸಗೊಳಿಸಲಾಯಿತು? ಮಳೆಗಾಲದಲ್ಲಿ ಅತಿಕ್ರಮಣದ ನಿರ್ಮಾಣವನ್ನು ಸಹ ನೆಲಸಮ ಮಾಡಲಾಗುವುದಿಲ್ಲ ಎಂದು ಮಧ್ಯಪ್ರದೇಶದ ಕಾನೂನು ಹೇಳುತ್ತದೆ. ಆದರೆ ನನ್ನ ತಾಯಿಯ ಹೆಸರಿನಲ್ಲಿದ್ದ ನಮ್ಮ ಕಾನೂನುಬದ್ಧ ಮನೆಯನ್ನು ನೆಲಸಮ ಮಾಡಲಾಗಿದೆ. ನಮ್ಮ ಕುಟುಂಬವು ಯಾವುದೇ ತಪ್ಪಿಲ್ಲದೆ ನರಳುತ್ತಿದೆ. ಮೊದಲೆರಡು ದಿನ, ನೆರೆಹೊರೆಯವರು ಊಟಕ್ಕೆ ವ್ಯವಸ್ಥೆ ಮಾಡಿದರು”ಎಂದು ಶುಕ್ಲಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News