×
Ad

ಸಂಸತ್‌ ಭದ್ರತಾ ವೈಫಲ್ಯ ಪ್ರಕರಣ: ಪ್ರಮುಖ ಸಂಚುಕೋರ ಲಲಿತ್‌ ಝಾ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು

Update: 2023-12-14 16:06 IST

Photo: PTI

ಹೊಸದಲ್ಲಿ: ಸಂಸತ್ತಿನಲ್ಲಿ ಬುಧವಾರ ಅಧಿವೇಶನ ನಡೆಯುತ್ತಿರುವಾಗ ಉಂಟಾದ ಭದ್ರತಾ ವೈಫಲ್ಯ ಘಟನೆಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರನೇ ಆರೋಪಿಯನ್ನು ಪತ್ತೆಹಚ್ಚಲು ದಿಲ್ಲಿ ಪೊಲೀಸರು ಹಲವಾರು ದಾಳಿಗಳನ್ನು ನಡೆಸುತ್ತಿದ್ದಾರೆ.

ಈ ಆರೋಪಿ, ಲಲಿತ್‌ ಝಾ ಎಂಬಾತ ಕೊಲ್ಕತ್ತಾ ಮೂಲದವನೆಂದು ಹೇಳಲಾಗಿದ್ದು ಈ ಘಟನೆಯಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದನೆಂದು ಹೇಳಲಾಗುತ್ತಿದೆ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಈತ ಪ್ರಮುಖ ಸಂಚುಕೋರನೆಂದು ತಿಳಿಯಲಾಗಿದೆ. ಕ್ರಾಂತಿಕಾರಿ ಭಗತ್‌ ಸಿಂಗ್‌ನಿಂದ ಪ್ರೇರಿತರಾಗಿ ದೇಶದ ಗಮನವನ್ನು ತಮ್ಮತ್ತ ಸೆಳೆಯಲು ಆತ ಮತ್ತು ಇತರ ಆರೋಪಿಗಳು ಈ ಕೃತ್ಯವೆಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಗೆ ಯಾವುದೇ ಉಗ್ರ ಸಂಘಟನೆಯ ನಂಟು ಇರುವುದು ಇಲ್ಲಿಯ ತನಕ ಪತ್ತೆಯಾಗಿಲ್ಲ. ಆರೋಪಿಗಳೆಲ್ಲರೂ ಪರಸ್ಪರ ಸಂಪರ್ಕಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಬಂದ ನಂತರ ಫೇಸ್ಬುಕ್‌ ಪೇಜ್ ಭಗತ್‌ ಸಿಂಗ್‌ ಅಭಿಮಾನಿಗೆ ಸೇರಿದ್ದರು.

ಲಲಿತ್‌, ಸಾಗರ್‌ ಶರ್ಮ ಮತ್ತು ಮನೋರಂಜನ್‌ ಡಿ ಒಂದು ವರ್ಷದ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿ ಸಂಸತ್ತಿಗೆ ನುಗ್ಗುವ ಯೋಜನೆ ರೂಪಿಸಿದ್ದರು. ನಂತರ ಅವರು ತಮ್ಮ ಯೋಜನೆಯಲ್ಲಿ ನೀಲಂ ಮತ್ತು ಅಮೋಲ್‌ರನ್ನೂ ಸೇರಿಸಿದ್ದರು.

“ಮಳೆಗಾಲದ ಅಧಿವೇಶನದ ವೇಳೆ ಸಂಸತ್ತಿನ ಎಲ್ಲಾ ಪ್ರವೇಶ ದ್ವಾರಗಳಿಗೆ ಭೇಟಿ ನೀಡುವಂತೆ ಮನೋರಂಜನ್‌ಗೆ ಲಲಿತ್‌ ಸೂಚಿಸಿದ್ದ. ಜುಲೈ ತಿಂಗಳಿನಲ್ಲಿ ದಿಲ್ಲಿಗೆ ಬಂದಿದ್ದ ಮನೋರಂಜನ್‌ ಸಂಸದರೊಬ್ಬರ ಮುಖಾಂತರ ದೊರೆತ ಪಾಸ್‌ ಬಳಸಿ ಸಂಸತ್ತಿಗೆ ಭೇಟಿಯಾಗಿದ್ದ. ಅಲ್ಲಿ ಶೂಗಳನ್ನು ಸಂಸತ್ತಿನಲ್ಲಿ ಪರಿಶೀಲಿಸಲಾಗುವುದಿಲ್ಲ ಎಂದು ಆತನಿಗೆ ತಿಳಿದು ಬಂದಿತ್ತು,” ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರಿಂದ ಮಾಹಿತಿ ದೊರಕಿದೆ.

ಬುಧವಾರ ಇತರ ನಾಲ್ಕು ಮಂದಿಯೊಂದಿಗೆ ಲಲಿತ್‌ ಸಂಸತ್‌ ಬಳಿ ಬಂದಿದ್ದ. ಇಬ್ಬರಿಗೆ ಮಾತ್ರ ಪಾಸ್‌ ದೊರಕಿದ್ದರಿಂದ ಲಲಿತ್‌ ಇತರ ಮೂವರ ಮೊಬೈಲ್‌ ಫೋನ್‌ ಪಡೆದುಕೊಂಡಿದ್ದ. ಸಂಸತ್ತಿನ ಒಳಗೆ ಮತ್ತು ಹೊರಗೆ ಸ್ಪ್ರೇ ಮಾಡಲಾಗಿದ್ದ ಬಣ್ಣದ ಹೊಗೆಯಿದ್ದ ಕ್ಯಾನಿಸ್ಟರ್‌ಗಳನ್ನು ಅಮೋಲ್‌ ಮಹಾರಾಷ್ಟ್ರದ ಕಲ್ಯಾಣ್‌ನಿಂದ ತಂದಿದ್ದ. ಸಾಗರ್‌ ಮತ್ತು ಮನೋರಂಜನ್‌ ಒಳ ಹೋದರೆ ನೀಲಂ ಮತ್ತು ಅಮೋಲ್‌ ಗೇಟ್‌ ಹೊರಗಿದ್ದು ತಮ್ಮ ಬಳಿ ಇದ್ದ ಕ್ಯಾನಿಸ್ಟರ್‌ ತೆರೆದಿದ್ದರು.

ನಂತರ ಲಲಿತ್‌ ಘಟನೆಯ ವೀಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಶಾಲ್‌ ಶರ್ಮ ಆಲಿಯಾಸ್‌ ವಿಕ್ಕಿ ಜೊತೆ ಹಂಚಿಕೊಂಡಿದ್ದ. ವಿಶಾಲ್ ಕೂಡ ಅವರ ಗುಂಪಿನ ಭಾಗವಾಗಿದ್ದನೆಂದು ತಿಳಿದು ಬಂದಿದೆ.

ಲಲಿತ್‌ ಕೊನೆಯದಾಗಿ ರಾಜಸ್ಥಾನ-ಹರ್ಯಾಣ ಗಡಿಯ ನೀಮ್ರಾನ ಎಂಬಲ್ಲಿರುವುದು ಪತ್ತೆಯಾಗಿತ್ತು. ಎಲ್ಲಾ ಐದು ಮಂದಿ ಡಿಸೆಂಬರ್‌ 10ರಂದು ಗುರುಗ್ರಾಮದಲ್ಲಿರುವ ವಿಶಾಲ್‌ ಶರ್ಮಾನ ನಿವಾಸದಲ್ಲಿ ಉಳಿದುಕೊಂಡಿದ್ದರು.

ಸದ್ಯ ನೀಲಂ, ಮನೋರಂಜನ್‌, ಅಮೋಲ್‌ ಮತ್ತು ವಿಶಾಲ್‌ ಪೊಲೀಸ್‌ ಕಸ್ಟಡಿಯಲ್ಲಿದ್ದು ದಿಲ್ಲಿ ಪೊಲೀಸರ ವಿಶೇಷ ಘಟಕ ಮತ್ತು ಇತರ ಪೊಲೀಸ್‌ ಅಧಿಕಾರಿಗಳು ಅವರನ್ನು ಪ್ರಶ್ನಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News