×
Ad

ಬಜೆಟ್ ಅಧಿವೇಶನ| ಜ.27ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರಕಾರ

Update: 2026-01-24 21:20 IST

Photo | PTI

ಹೊಸದಿಲ್ಲಿ,ಜ.24: ಸರಕಾರವು ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುನ್ನ ಶಾಸಕಾಂಗ ಮತ್ತು ಇತರ ಕಾರ್ಯಸೂಚಿಗಳನ್ನು ಚರ್ಚಿಸಲು ಜ.27ರಂದು ಸರ್ವಪಕ್ಷ ಸಭೆಯನ್ನು ಕರೆದಿದೆ.

ಜ.28ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಬೈಠಕ್‌ನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ.

ಸಂಸತ್ತಿನ ಇತಿಹಾಸದಲ್ಲಿ ಅಪರೂಪದ ಸಂದರ್ಭದಲ್ಲಿ ಕೇಂದ್ರ ಮುಂಗಡಪತ್ರವನ್ನು ರವಿವಾರ ಆಗಿರುವ ಫೆ.1ರಂದು ಮಂಡಿಸಲಾಗುತ್ತಿದ್ದು, ಇದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಸತತ ಒಂಭತ್ತನೇ ಬಜೆಟ್ ಆಗಲಿದೆ.

ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಕರೆದಿರುವ ಸರ್ವಪಕ್ಷ ಸಭೆಯು ಜ.27ರಂದು ಪೂರ್ವಾಹ್ನ 11 ಗಂಟೆಗೆ ಸಂಸತ್ ಭವನದ ಸಂಯೋಜಿತ ಕಟ್ಟಡದ ಮುಖ್ಯ ಸಮಿತಿ ಕೊಠಡಿಯಲ್ಲಿ ನಡೆಯಲಿದೆ ಎಂದು ಸರಕಾರಿ ಮೂಲವು ತಿಳಿಸಿದೆ.

ಬಜೆಟ್ ಅಧಿವೇಶನವು ಎ.2ರವರೆಗೆ ನಡೆಯಲಿದೆ. ಮೊದಲ ಹಂತವು ಫೆ.13ರಂದು ಅಂತ್ಯಗೊಳ್ಳಲಿದ್ದು, ಮಾ.9ರಂದು ಸಂಸತ್ತು ಮರು ಸಮಾವೇಶಗೊಳ್ಳಲಿದೆ.

ಮನರೇಗಾದ ಬದಲಿಗೆ ತರಲಾಗಿರುವ ವಿಬಿ-ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಅಭಿಯಾನ ನಡೆಸುತ್ತಿರುವ ಸಮಯದಲ್ಲಿಯೇ ಅಧಿವೇಶನ ನಡೆಯಲಿದೆ.

ಈ ನಡುವೆ ಆಡಳಿತಾರೂಢ ಬಿಜೆಪಿಯು ನೂತನ ಶಾಸನವು ಸುಧಾರಣಾ ವಾದಿಯಾಗಿದೆ ಮತ್ತು ಹಳೆಯ ಕಾನೂನಿನಲ್ಲಿಯ ಲೋಪದೋಷಗಳನ್ನು ನಿವಾರಿಸಲು ಅಗತ್ಯ ಎಂದು ಬಿಂಬಿಸಲು ಪ್ರತಿ-ಅಭಿಯಾನವನ್ನು ನಡೆಸುತ್ತಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕಗಳು ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲುಗೊಳಿಸಿರುವ ಸಮಯದಲ್ಲಿ ಕೇಂದ್ರ ಮುಂಗಡಪತ್ರ ಮಂಡನೆಯಾಗಲಿದೆ.

ಆಂತರಿಕ ಸುತ್ತೋಲೆಯ ಪ್ರಕಾರ ಲೋಕಸಭೆಯು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆಗಾಗಿ ಫೆ.2ರಿಂದ 4ರವರೆಗೆ ಮೂರು ದಿನಗಳನ್ನು ತಾತ್ಕಾಲಿಕವಾಗಿ ನಿಗದಿಗೊಳಿಸಿದೆ. ಜ.28 ಮತ್ತು ಫೆ.1ರಂದು ಶೂನ್ಯವೇಳೆ ಇರುವುದಿಲ್ಲ.

ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ ಮಸೂದೆ- 2025; ಸೆಕ್ಯುರಿಟೀಸ್ ಮಾರುಕಟ್ಟೆ ಸಂಹಿತೆ-2025; ಮತ್ತು ಸಂವಿಧಾನ (129ನೇ ತಿದ್ದುಪಡಿ) ಮಸೂದೆ -2024 ಸೇರಿದಂತೆ ಒಂಭತ್ತು ಮಸೂದೆಗಳು ಲೋಕಸಭೆಯಲ್ಲಿ ಬಾಕಿಯಿವೆ.

ಪ್ರಸ್ತುತ ಈ ಮಸೂದೆಗಳನ್ನು ಸಂಸದೀಯ ಸ್ಥಾಯಿ ಅಥವಾ ಆಯ್ಕೆ ಸಮಿತಿಗಳು ಪರಿಶೀಲಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News