ಗುಜರಾತ್ | ಉದ್ಯಮಿಯ ಮೃತದೇಹ ಚೀಲಗಳಲ್ಲಿ ಪತ್ತೆ : 1 ಕೋಟಿ ರೂ.ಗೆ ಬೇಡಿಕೆಯಿಟ್ಟು ಕೊಲೆಗೈದ ಸಿಬ್ಬಂದಿ!
ಸಾಂದರ್ಭಿಕ ಚಿತ್ರ (PTI)
ಸೂರತ್: ಸೂರತ್‌ನ ಆಲ್ಥಾನ್ ಪ್ರದೇಶದಲ್ಲಿ ಖಾಸಗಿ ಭದ್ರತಾ ಸಂಸ್ಥೆಯೊಂದರ ಮಾಲಕನ ಮೃತದೇಹ ಎರಡು ಚೀಲಗಳಲ್ಲಿ ಪತ್ತೆಯಾಗಿದೆ. 1 ಕೋಟಿ ರೂ. ಬೇಡಿಕೆಯಿಟ್ಟು ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಭೀಕರವಾಗಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ದುಬೆ ಅವರು ಸೆಕ್ಯುರಿಟಿ ಸರ್ವೀಸಸ್ ಎಂಬ ಭದ್ರತಾ ಸಂಸ್ಥೆಯನ್ನು ನಡೆಸುತ್ತಿದ್ದರು. ಸಲಬತ್ಪುರದಲ್ಲಿ ಇದರ ಕಚೇರಿ ಇತ್ತು. 200 ಭದ್ರತಾ ಸಿಬ್ಬಂದಿಗಳನ್ನು ತನ್ನ ಸಂಸ್ಥೆಗೆ ನೇಮಿಸಿ ಅವರನ್ನು ವಿವಿಧ ಕಡೆ ಕರ್ತವ್ಯಕ್ಕೆ ನಿಯೋಜಿಸಿದ್ದರು. ಆಟೋ ಡ್ರೈವರ್ ಆಗಿದ್ದ ರಶೀದ್ ಅನ್ಸಾರಿ ಕೂಡ ದುಬೆ ಅವರ ಸಂಸ್ಥೆಗೆ 18 ತಿಂಗಳ ಹಿಂದೆ ಸೇರಿಕೊಂಡಿದ್ದ ಮಾತ್ರವಲ್ಲದೆ ಕಡಿಮೆ ಅವಧಿಯಲ್ಲಿ ಅವರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದ.
ದುಬೆ ತನ್ನ ಕಚೇರಿಯಿಂದ ಸೋಮವಾರ ಸಂಜೆ 6 ಗಂಟೆಗೆ ಅನ್ಸಾರಿಯ ಆಟೋದಲ್ಲಿ ತೆರಳಿದ್ದರು. ಮೊದಲು ಪಾಂಡೇಸರ ಸಿಇಟಿಪಿ ಸ್ಥಾವರಕ್ಕೆ ಹೋಗಿ ಅಲ್ಲಿನ ಸಿಬ್ಬಂದಿಗೆ ವೇತನ ಪಾವತಿಸಿದರು. ನಂತರ ಅಭ್ವಾದಲ್ಲಿರುವ ಶಾಲೆಗೆ ಹೋಗಿ ಅಲ್ಲಿ ನಿಯೋಜಿಸಿದ್ದ ಸಿಬ್ಬಂದಿಗೆ ವೇತನ ಪಾವತಿ ಮಾಡಿದರು. ಆದರೆ ಆ ಬಳಿಕ ಅವರು ಮನೆಗೆ ತೆರಳಿಲ್ಲ. ದುಬೆ ಮನೆಗೆ ತೆರಳದ ಕಾರಣ ಅನ್ಸಾರಿಗೆ ಕರೆ ಮಾಡಿ ಮನೆಯವರು ವಿಚಾರಿಸಿದ್ದಾರೆ. ಈ ವೇಳೆ ದುಬೆ ಸಿಬಿ ಪಟೇಲ್ ಕ್ರೀಡಾಂಗಣದ ಬಳಿ ಆಟೋದಿಂದ ಇಳಿದು ಬಿಳಿ ಬಣ್ಣದ ಕಾರಿನಲ್ಲಿ ತೆರಳಿದ್ದಾರೆ ಎಂದು ಅನ್ಸಾರಿ ಹೇಳಿದ್ದಾನೆ. ಹೆಚ್ಚಿನ ಹುಟುಕಾಟ ನಡೆಸಿದಾಗಲೂ ದುಬೆ ಪತ್ತೆಯಾಗಿರಲಿಲ್ಲ. ಇದರಿಂದಾಗಿ ದುಬೆ ಕುಟುಂಬ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದೆ.
ಮೇ 13ರಂದು ಅನ್ಸಾರಿ ಪೊಲೀಸರು ಮತ್ತು ಕುಟುಂಬಸ್ಥರೊಂದಿಗೆ ಅನುಮಾನ ಬರದಂತೆ ಹುಡುಕಾಟದಲ್ಲಿ ತೊಡಗಿದ್ದ, ಆದರೆ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಲು ತೊಡಗಿದಾಗ ಅನ್ಸಾರಿ ನಾಪತ್ತೆಯಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಪುರಾವೆಗಳ ಆಧಾರದಲ್ಲಿ ರಶೀದ್ ಅನ್ಸಾರಿ ಕೃತ್ಯವನ್ನು ಎಸಗಿದ್ದಾನೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ ಮತ್ತು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮೇ 12ರಂದು ಬಿಹಾರ ಮೂಲದ ರಶೀದ್ ಅನ್ಸಾರಿ ದುಬೆಯನ್ನು ತನ್ನ ಮನೆಗೆ ಕರೆದೊಯ್ದು1 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ ಅವರನ್ನು ಕೊಲೆ ಮಾಡಿ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ನದಿ ಬಳಿ ಎಸೆದಿದ್ದಾನೆ.
ಪೊಲೀಸರು ಹೇಳಿದ್ದೇನು?
ಈ ಕುರಿತು ಉಪ ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಗುರ್ಜರ್ ಪ್ರತಿಕ್ರಿಯಿಸಿ, ನಾವು 500ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಒಂದು ಕ್ಯಾಮೆರದಲ್ಲಿ ದುಬೆ ಅನ್ಸಾರಿಯ ರಿಕ್ಷಾದಲ್ಲಿ ಕುಳಿತಿರುವುದು ಕಂಡುಬಂದಿದೆ. ಅವರನ್ನು ಅನ್ಸಾರಿ ಉನ್ ಪ್ರದೇಶದ ಭಿಂಡಿ ಬಜಾರ್‌ನಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದಾನೆ. ಆದರೆ ದುಬೆ, ಅನ್ಸಾರಿಯ ಮನೆಯಿಂದ ಹೊರಬರುತ್ತಿರುವುದು ಕಂಡುಬಂದಿಲ್ಲ. ಮಂಗಳವಾರ ಬೆಳಿಗ್ಗೆ ಅನ್ಸಾರಿ ಎರಡು ಚೀಲಗಳೊಂದಿಗೆ ಮನೆಯಿಂದ ಹೊರ ಬಂದಿರುವುದು ಕಂಡುಬಂದಿದೆ. ನಾವು ನದಿಯವರೆಗೆ ಅವನ ಚಲನವಲನಗಳನ್ನು ಪತ್ತೆಹಚ್ಚಿದ್ದೇವೆ. ಹೆಚ್ಚಿನ ಪರಿಶೀಲನೆ ನಡೆಸಿದಾಗ ಎರಡು ಚೀಲಗಳಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಆಲ್ಥಾನ್ ಪೊಲೀಸ್ ಇನ್ಸ್ಪೆಕ್ಟರ್ ಡಿ ಡಿ ಚೌಹಾಣ್, ದುಬೆಯ ಮೊಬೈಲ್ ಸಂಖ್ಯೆಯಿಂದ ಕುಟುಂಬ ಸದಸ್ಯರಿಗೆ 1 ಕೋಟಿರೂ. ಬೇಡಿಕೆಯಿಟ್ಟು ಕರೆ ಮಾಡಿರುವುದು ಮತ್ತು ಸಂದೇಶವನ್ನು ಕಳಹಿಸಿರುವುದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.