×
Ad

VVPAT ಸ್ಲಿಪ್‌ಗಳ ಸಂಪೂರ್ಣ ಎಣಿಕೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ: ಚುನಾವಣಾ ಆಯೋಗದ ಅಧಿಕಾರಿಗಳಿಗೆ ಅಪರಾಹ್ನ 2 ಗಂಟೆಗೆ ಹಾಜರಾಗಲು ಸುಪ್ರೀಂ ಸೂಚನೆ

Update: 2024-04-24 11:54 IST

ಹೊಸದಿಲ್ಲಿ: ಇವಿಎಂಗಳ ಮೂಲಕ ಚಲಾಯಿಸಿದ ಮತಗಳ ಜೊತೆಗೆ ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಶೇ 100ರಷ್ಟು ಎಣಿಕೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ಈ ಕುರಿತು ತನಗೆ ಇನ್ನಷ್ಟು ಸ್ಪಷ್ಟತೆ ಬೇಕೆಂದು ಹೇಳಿದೆಯಲ್ಲದೆ ಇಂದು ಅಪರಾಹ್ನ 2 ಗಂಟೆಗೆ ತನ್ನೆದುರು ಹಾಜರಾಗುವಂತೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸೂಚಿಸಿದೆ.

ಇವಿಎಂ, ವಿವಿಪ್ಯಾಟ್‌ ಕುರಿತಂತೆ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ಇಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತಾ ಅವರ ಪೀಠ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.

ಇವಿಎಂಗಳ ಸೋರ್ಸ್‌ ಕೋಡ್‌ ಅನ್ನು ಎಂದಿಗೂ ಬಹಿರಂಗಪಡಿಸುವಂತಿಲ್ಲ ಏಕೆಂದರೆ ಅದು ದುರುಪಯೋಗವಾಗಬಹುದು ಎಂದು ವಿಚಾರಣೆ ವೇಳೆ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.

ಈ ಹಿಂದೆ ಎಪ್ರಿಲ್‌ 18ರಂದು ನಡೆದ ವಿಚಾರಣೆ ವೇಳೆ ಚುನಾವಣಾ ಆಯೋಗದ ಅಧಿಕಾರಿಗಳು ಇವಿಎಂ ಮತ್ತು ವಿವಿಪ್ಯಾಟ್‌ ಕುರಿತಂತೆ ನ್ಯಾಯಾಲಯದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದರು.

ಇವಿಎಂನ ಯಾವ ಬಟನ್‌ ಯಾವ ಪಕ್ಷಕ್ಕೆ ನಿಗದಿಪಡಿಸಲಾಗುತ್ತದೆ ಅಥವಾ ಯಾವ ಯಂತ್ರ ಯಾವ ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುತ್ತದೆ ಎಂಬುದು ಇವಿಎಂ ತಯಾರಿಕರಿಗೆ ತಿಳಿದಿರುವುದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಈ ಸಂದರ್ಭ ಸುಪ್ರೀಂ ಕೋರ್ಟಿಗೆ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News