ನಗದು ಪತ್ತೆ ಪ್ರಕರಣ | ನ್ಯಾ. ವರ್ಮಗೆ ಪದಚ್ಯುತಿಯಿಂದ ಪಾರಾಗಲು ರಾಜೀನಾಮೆಯೊಂದೇ ಮಾರ್ಗ
Photo Credit: X/@ANI; PTI
ಹೊಸದಿಲ್ಲಿ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶ್ವಂತ್ ವರ್ಮ ವಿರುದ್ಧ ಸಂಸತ್ತಿನಲ್ಲಿ ನಿರ್ಣಯವೊಂದನ್ನು ಮಂಡಿಸಲು ಕೇಂದ್ರ ಸರಕಾರ ಮುಂದಾಗಿರುವುದರಿಂದ, ಸಂಸತ್ತಿನ ವಾಗ್ದಂಡನೆಯಿಂದ ಪಾರಾಗಲು ರಾಜೀನಾಮೆ ನೀಡುವುದೊಂದೇ ಅವರ ಮುಂದಿರುವ ಏಕೈಕ ಆಯ್ಕೆಯಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯಾವುದೇ ಸದನದ ಸಂಸದರೆದುರು ತಮ್ಮ ಪ್ರಕರಣವನ್ನು ಸಮರ್ಥಿಸಿಕೊಳ್ಳಯಲು ಮುಂದಾದಾಗ, ತಾನು ಹುದ್ದೆಯನ್ನು ತ್ಯಜಿಸುತ್ತಿದ್ದೇನೆ ಎಂದು ನ್ಯಾ. ಯಶ್ವಂತ್ ವರ್ಮ ಮೌಖಿಕ ಹೇಳಿಕೆ ನೀಡಿದರೂ, ಅದನ್ನು ರಾಜೀನಾಮೆ ಎಂದೇ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರ ನೇಮಕ ಮತ್ತು ಪದಚ್ಯುತಿ ವಿಧಾನಗಳ ಕುರಿತು ಅರಿವಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ಅವರೇನಾದರೂ ರಾಜೀನಾಮೆ ನೀಡಲು ತೀರ್ಮಾನಿಸಿದರೆ, ಅವರು ಪಿಂಚಣಿ ಹಾಗೂ ಇನ್ನಿತರ ಲಾಭಗಳಿಗೆ ಅರ್ಹರಾಗಲಿದ್ದು, ಅವರನ್ನು ನಿವೃತ್ತ ನ್ಯಾಯಮೂರ್ತಿ ಎಂದೂ ಪರಿಗಣಿಸಲಾಗುತ್ತದೆ. ಒಂದು ವೇಳೆ, ಅವರೇನಾದರೂ ಸಂಸತ್ತಿನಿಂದ ಪದಚ್ಯುತಗೊಂಡರೆ, ಅವರು ಪಿಂಚಣಿ ಹಾಗೂ ಇನ್ನಿತರ ಲಾಭಗಳಿಂದ ನಿರಾಕರಣೆಗೊಳಗಾಗಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಸಂವಿಧಾನದ ವಿಧಿ 217ರ ಅನ್ವಯ, ಒಂದು ವೇಳೆ ಹೈಕೋರ್ಟ್ ನ್ಯಾಯಾಧೀಶರೊಬ್ಬರು, “ನಾನು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ರಾಷ್ಟ್ರಪತಿಗಳಿಗೆ ಕೈಬರಹದ ಪತ್ರ ಬರೆದರೂ ಸಾಕು, ಅದನ್ನು ರಾಜೀನಾಮೆ ಎಂದೇ ಪರಿಗಣಿಸಲಾಗುತ್ತದೆ. ನ್ಯಾಯಾಧೀಶರೊಬ್ಬರ ರಾಜೀನಾಮೆ ಪತ್ರದ ಅಂಗೀಕಾರಕ್ಕೆ ಯಾವುದೇ ಅನುಮೋದನೆಯ ಅಗತ್ಯವಿಲ್ಲ. ಒಂದು ಸರಳ ರಾಜೀನಾಮೆ ಪತ್ರ ಕೂಡಾ ಸಾಕಾಗುತ್ತದೆ.
ತಾನು ಯಾವಾಗ ಹುದ್ದೆಯಿಂದ ನಿರ್ಗಮಿಸುತ್ತೇನೆ ಎಂಬ ಕುರಿತು ನ್ಯಾಯಾಧೀಶರೊಬ್ಬರು ಸಂಭಾವ್ಯ ದಿನಾಂಕವನ್ನು ಉಲ್ಲೇಖಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ, ಯಾವುದೇ ನ್ಯಾಯಾಧೀಶರು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆಯಬಹುದಾಗಿದೆ.
ಆದರೆ, ಸಂಸತ್ತಿನಿಂದ ಪದಚ್ಯುತಗೊಳ್ಳುವುದು ನ್ಯಾಯಾಧೀಶರೊಬ್ಬರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ಮತ್ತೊಂದು ವಿಧಾನವಾಗಿದೆ.
ಇದಕ್ಕೂ ಮುನ್ನ, ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದ ಸುಪ್ರೀಂ ಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನಗದು ಪತ್ತೆ ವಿವಾದದಲ್ಲಿ ಸಿಲುಕಿಕೊಂಡಿರುವ ನ್ಯಾ. ಯಶ್ವಂತ್ ವರ್ಮರನ್ನು ಹುದ್ದೆಯಿಂದ ತೆಗೆದು ಹಾಕುವಂತೆ ಶಿಫಾರಸು ಮಾಡಿದ್ದರು.
ನ್ಯಾ. ಸಂಜೀವ್ ಖನ್ನಾರ ಈ ವರದಿ, ನಗದು ಪತ್ತೆ ಪ್ರಕರಣದ ಕುರಿತು ಮೂವರು ನ್ಯಾಯಾಧೀಶರನ್ನೊಳಗೊಂಡ ಆಂತರಿಕ ಸಮಿತಿಯ ತನಿಖೆಯಲ್ಲಿ ಪತ್ತೆಯಾಗಿದ್ದ ಸಂಗತಿಗಳನ್ನು ಆಧರಿಸಿತ್ತು. ರಾಜೀನಾಮೆ ಸಲ್ಲಿಸುವಂತೆ ನ್ಯಾ. ವರ್ಮಗೆ ನ್ಯಾ. ಸಂಜೀವ್ ಖನ್ನಾ ತಾಕೀತು ಮಾಡಿದ್ದರಾದರೂ, ಅವರದಕ್ಕೆ ನಿರಾಕರಿಸಿದ್ದರು ಎಂದು ಈ ಮುನ್ನ ವರದಿಯಾಗಿತ್ತು.
ನ್ಯಾ. ಯಶ್ವಂತ್ ವರ್ಮರನ್ನು ವಾಗ್ದಂಡನೆಗೊಳಪಡಿಸಿ, ಅವರನ್ನು ಪದಚ್ಯುತಗೊಳಿಸುವ ನಿರ್ಣಯ ಸಂಸತ್ತಿನ ಉಭಯ ಸದನಗಳ ಪೈಕಿ ಒಂದರಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.