ಅರಣ್ಯ ಭೂಮಿ ಕಬಳಿಕೆಯಾಗುತ್ತಿದ್ದರೂ ಉತ್ತರಾಖಂಡ ಮೂಕಪ್ರೇಕ್ಷಕ: ಸುಪ್ರೀಂ ಕಳವಳ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ: ಉತ್ತರಾಖಂಡದಲ್ಲಿ ಖಾಸಗಿ ವ್ಯಕ್ತಿಗಳು ಅರಣ್ಯಭೂಮಿಯನ್ನು ಕಬಳಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಹಲವು ವರ್ಷಗಳಿಂದ ರಾಜ್ಯ ಸರ್ಕಾರ ಮೂಕಪ್ರೇಕ್ಷಕನಾಗಿ ಕುಳಿತಿರುವುದು ಆಘಾತಕಾರಿ ಎಂದು ಅಭಿಪ್ರಾಯಪಟ್ಟಿದೆ.
ಅರಣ್ಯ ಭೂಮಿ ವ್ಯಾಜ್ಯದ ಕುರಿತ ಮೇಲ್ಮನವಿ ವಿಚಾರಣೆಯ ವೇಳೆ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯ್ ಮಲ್ಯಾ ಬಗ್ಚಿ ಅವರನ್ನೊಳಗೊಂಡ ನ್ಯಾಯಪೀಠ, ಈ ಪ್ರಕರಣವನ್ನು ಮತ್ತಷ್ಟು ವಿಸ್ತೃತವಾಗಿ ವಿಚಾರಣೆ ನಡೆಸಲು ನಿರ್ಧರಿಸಿತು. ಸರ್ಕಾರ ಅರಣ್ಯ ಭೂಮಿ ಎಂದು ಅಧಿಸೂಚನೆ ಹೊರಡಿಸಿದ 2866 ಎಕರೆ ಭೂಮಿಯನ್ನು 1950ರಲ್ಲಿ ಹೃಷಿಕೇಶದ ಪಶುಲೋಕ ಸೇವಾ ಸೊಸೈಟಿಗೆ ಲೀಸ್ ಆಧಾರದಲ್ಲಿ ನೀಡಿದೆ ಎಂದು ಆಪಾದಿಸಲಾಗಿದೆ. ಸೊಸೈಟಿ ಇದನ್ನು ಆ ಬಳಿಕ ತನ್ನ ಸದಸ್ಯರಿಗೆ ತುಂಡು ತುಂಡಾಗಿ ಮಾಡಿ ಹಂಚಿಕೆ ಮಾಡಿತ್ತು ಎನ್ನಲಾಗಿದೆ.
ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಹೇಗೆ ವ್ಯವಸ್ಥಿತವಾಗಿ ಖಾಸಗಿ ವ್ಯಕ್ತಿಗಳು ಕಬಳಿಸುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರಲ್ಲಿ ಆಘಾತಕಾರಿ ಅಂಶವೆಂದರೆ, ಅರಣ್ಯಭೂಮಿಯನ್ನು ಕಣ್ಣೆದುರೇ ವ್ಯವಸ್ಥಿತವಾಗಿ ಕಬಳಿಸುತ್ತಿದ್ದರೂ, ಉತ್ತರಾಖಂಡ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದಾರೆ. ಆದ್ದರಿಂದ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ನೋಟಿಸ್ ನೀಡಲಾಗುವುದು ಎಂದು ನ್ಯಾಯಮೂರ್ತಿಗಳು ಹೇಳಿದರು.
ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲು ನ್ಯಾಯಪೀಠ ಆದೇಶಿಸಿದ್ದು, ಸರ್ಕಾರದಿಂದ ವರದಿ ಕೇಳಿದೆ. ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಸಂಬಂಧಪಟ್ಟ ಎಲ್ಲರಿಗೆ ಸೂಚನೆ ನೀಡಲಾಗಿದೆ.