×
Ad

ದೇಣಿಗೆ ಸಂಗ್ರಹದಲ್ಲಿ ದಾಖಲೆಯ ಏರಿಕೆ ಕಂಡ BJP; ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳ ದೇಣಿಗೆ ಕುಸಿತ

► ಒಂದೇ ವರ್ಷದಲ್ಲಿ 2,121 ಕೋಟಿ ರೂಪಾಯಿ, ಅಂದರೆ ಶೇ.53.4ರಷ್ಟು 'ಗಳಿಸಿದ' ಭಾರತೀಯ ಜನತಾ ಪಕ್ಷ ► JDU, SP, CPI(ML)L ಪಕ್ಷಗಳ ದೇಣಿಗೆಯಲ್ಲೂ ಏರಿಕೆ

Update: 2025-12-23 10:33 IST

PC: x.com/DeccanHerald

ಹೊಸದಿಲ್ಲಿ: ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024–25ರಲ್ಲಿ ಕಾಂಗ್ರೆಸ್‌ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹದಲ್ಲಿ ಇಳಿಕೆಯನ್ನು ಕಂಡಿದ್ದರೂ, ಭಾರತೀಯ ಜನತಾ ಪಕ್ಷ(BJP) ಮಾತ್ರ ದೇಣಿಗೆಗಳಲ್ಲಿ ಭಾರೀ ಏರಿಕೆ ದಾಖಲಿಸಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಲೆಕ್ಕಪರಿಶೋಧನಾ ಮತ್ತು ಕೊಡುಗೆ ವರದಿಗಳ ಪ್ರಕಾರ, ಬಿಜೆಪಿಯ ದೇಣಿಗೆಗಳು ಸುಮಾರು ಒಂದೂವರೆ ಪಟ್ಟು ಹೆಚ್ಚಾಗಿವೆ.

2023–24ರಲ್ಲಿ 3,967 ಕೋಟಿ ರೂಪಾಯಿ ದೇಣಿಗೆ ಪಡೆದಿದ್ದ ಬಿಜೆಪಿ, 2024–25ರಲ್ಲಿ 6,088 ಕೋಟಿ ರೂಪಾಯಿ ಸಂಗ್ರಹಿಸಿದೆ. ಅಂದರೆ, ಒಂದೇ ವರ್ಷದಲ್ಲಿ ಸುಮಾರು 2,121 ಕೋಟಿ ರೂಪಾಯಿ ಹೆಚ್ಚುವರಿ ದೇಣಿಗೆ ಲಭಿಸಿದ್ದು, ಇದು ಶೇ.53.4ರಷ್ಟು ಏರಿಕೆಯಾಗಿದೆ!

ಫೆಬ್ರವರಿ 2024ರಲ್ಲಿ ಚುನಾವಣಾ ಬಾಂಡ್ ಯೋಜನೆ ರದ್ದಾದ ಬಳಿಕ, ಚುನಾವಣಾ ಟ್ರಸ್ಟ್‌ಗಳ ಮೂಲಕ ಬಂದ ದೇಣಿಗೆಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಪ್ರಮುಖ ದಾನಿಯಾಗಿರುವ ಪ್ರುಡೆಂಟ್ ಎಲೆಕ್ಟೊರಲ್ ಟ್ರಸ್ಟ್ ಕಳೆದ ಹಣಕಾಸು ವರ್ಷದಲ್ಲಿ 15 ರಾಜಕೀಯ ಪಕ್ಷಗಳಿಗೆ ಒಟ್ಟು 2,668 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಈ ಪೈಕಿ ಬಿಜೆಪಿ ಪಕ್ಷಕ್ಕೆ ಚುನಾವಣಾ ಟ್ರಸ್ಟ್‌ ಗಳಿಂದ 3,142.65 ಕೋಟಿ ರೂಪಾಯಿ ಲಭಿಸಿದೆ.

ಇದಕ್ಕೆ ವಿರುದ್ಧವಾಗಿ ತೃಣಮೂಲ ಕಾಂಗ್ರೆಸ್, ವೈಎಸ್ಆರ್ ಕಾಂಗ್ರೆಸ್, ಬಿಜೆಡಿ, ಟಿಡಿಪಿ ಮತ್ತು ಬಿಆರ್‌ಎಸ್ ಪಕ್ಷಗಳಿಗೆ ದೇಣಿಗೆಗಳಲ್ಲಿ ಕುಸಿತ ಕಂಡಿದೆ. ಆದರೆ ಜೆಡಿ(ಯು), ಸಮಾಜವಾದಿ ಪಕ್ಷ ಹಾಗೂ ಸಿಪಿಐ(ಎಂಎಲ್)ಎಲ್ ಪಕ್ಷಗಳಿಗೆ ದೇಣಿಗೆಗಳಲ್ಲಿ ಏರಿಕೆಯಾಗಿದೆ.

2023–24ರಲ್ಲಿ ಕಾಂಗ್ರೆಸ್‌ ಗೆ 1,129.66 ಕೋಟಿ ರೂಪಾಯಿ ದೇಣಿಗೆ ಲಭಿಸಿದ್ದರೆ, ಅದೇ ಅವಧಿಯಲ್ಲಿ ಬಿಜೆಪಿಗೆ 522.13 ಕೋಟಿ ರೂಪಾಯಿ ಮಾತ್ರ ಬಂದಿತ್ತು. ಆದರೆ 2024–25ರಲ್ಲಿ ಬಿಜೆಪಿಗೆ ಬಂದ ದೇಣಿಗೆಗಳು ಕಾಂಗ್ರೆಸ್‌ಗೆ ಹೋಲಿಸಿದರೆ ಸುಮಾರು 12 ಪಟ್ಟು ಹೆಚ್ಚಾಗಿದೆ. ಕಾಂಗ್ರೆಸ್‌ನ ಲೆಕ್ಕಪರಿಶೋಧನಾ ವರದಿ ಪ್ರಕಾರ, 2024–25ರಲ್ಲಿ ಪಕ್ಷವು ಒಟ್ಟು 1,111.94 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಅದರಲ್ಲಿ 896.22 ಕೋಟಿ ರೂಪಾಯಿ ಚುನಾವಣೆಗಳಿಗೆ ಖರ್ಚಾಗಿದೆ.

ತೃಣಮೂಲ ಕಾಂಗ್ರೆಸ್‌ ಗೆ ಬಂದ ದೇಣಿಗೆಗಳು 646.39 ಕೋಟಿ ರೂಪಾಯಿಯಿಂದ 184.08 ಕೋಟಿ ರೂಪಾಯಿಗೆ ಇಳಿದಿದ್ದು, ಅದರ ಒಟ್ಟು ವೆಚ್ಚ 227.59 ಕೋಟಿ ರೂಪಾಯಿ. ಈ ಪೈಕಿ 137.58 ಕೋಟಿ ರೂಪಾಯಿ ಚುನಾವಣಾ ವೆಚ್ಚವಾಗಿದೆ. ವೈಎಸ್ಆರ್ ಕಾಂಗ್ರೆಸ್‌ ಗೆ 140.05 ಕೋಟಿ ರೂಪಾಯಿ ದೇಣಿಗೆ ಲಭಿಸಿದ್ದು, ಹಿಂದಿನ ವರ್ಷದ 184.11 ಕೋಟಿ ರೂಪಾಯಿಗಿಂತ ಕಡಿಮೆ. ಆದರೆ ಅದರ ಚುನಾವಣಾ ವೆಚ್ಚ 299.92 ಕೋಟಿ ರೂಪಾಯಿ ಆಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಟಿಡಿಪಿಗೆ ಬಂದ ದೇಣಿಗೆ 274.65 ಕೋಟಿ ರೂಪಾಯಿಯಿಂದ 85.20 ಕೋಟಿ ರೂಪಾಯಿಗೆ ಇಳಿದಿದೆ. ಬಿಜೆಡಿಯ ದೇಣಿಗೆಗಳು 245.5 ಕೋಟಿ ರೂಪಾಯಿಯಿಂದ 60 ಕೋಟಿ ರೂಪಾಯಿಗೆ ಕುಸಿದಿವೆ. ಸಿಪಿಐ(ಎಂಎಲ್)ಎಲ್ ಪಕ್ಷದ ದೇಣಿಗೆ 94.63 ಲಕ್ಷ ರೂಪಾಯಿಯಿಂದ 2.98 ಕೋಟಿ ರೂಪಾಯಿಗೆ ಏರಿಕೆಯಾಗಿ, 2024–25ರಲ್ಲಿ ಅದು 1.69 ಕೋಟಿ ರೂಪಾಯಿ ಚುನಾವಣಾ ವೆಚ್ಚ ಮಾಡಿದೆ. ಜೆಡಿ(ಯು) ದೇಣಿಗೆಗಳು 4.35 ಕೋಟಿ ರೂಪಾಯಿಯಿಂದ 18.69 ಕೋಟಿ ರೂಪಾಯಿಗೆ ಹೆಚ್ಚಾಗಿದ್ದು, ಸಮಾಜವಾದಿ ಪಕ್ಷಕ್ಕೆ ಬಂದ ದೇಣಿಗೆಗಳು 48.22 ಲಕ್ಷ ರೂಪಾಯಿಯಿಂದ 94.47 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

ಬಿಜೆಪಿ ತನ್ನ ದೇಣಿಗೆಯ ವರದಿಯನ್ನು ಸಲ್ಲಿಸಿದ್ದರೂ, ಅದರ ಲೆಕ್ಕಪರಿಶೋಧನಾ ವರದಿ ಇನ್ನೂ ಚುನಾವಣಾ ಆಯೋಗದ ವೆಬ್‌ಸೈಟ್‌ ನಲ್ಲಿ ಪ್ರಕಟವಾಗಿಲ್ಲ.

ಸೌಜನ್ಯ: thehindu.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News