ಸಮಸ್ಯೆ ಪರಿಹರಿಸಲು ರಾಜಕೀಯ ಪಕ್ಷಗಳನ್ನು ನಿಯಮಿತವಾಗಿ ಭೇಟಿ ಮಾಡಿ ; ರಾಜ್ಯ, ಜಿಲ್ಲಾ ಮಟ್ಟದ ಚುನಾವಣಾಧಿಕಾರಿಗಳಿಗೆ ಮುಖ್ಯ ಚುನಾವಣಾ ಆಯುಕ್ತ ಸೂಚನೆ
ಹೊಸದಿಲ್ಲಿ: ರಾಜಕೀಯ ಪಕ್ಷಗಳ ದುಮ್ಮಾನಗಳನ್ನು ಪರಿಹರಿಸುವುದಕ್ಕಾಗಿ ಅವುಗಳ ಪ್ರತಿನಿಧಿಗಳನ್ನು ನಿಯಮಿತವಾಗಿ ಭೇಟಿಯಾಗುವಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಂಗಳವಾರ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮತದಾರ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮತದಾರರ ಪಟ್ಟಿಗಳಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂಬುದಾಗಿ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳ ನಡುವೆಯೇ ಮುಖ್ಯ ಚುನಾವಣಾ ಆಯುಕ್ತರು ಈ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕುಮಾರ್, 1950 ಮತ್ತು 1951ರ ಜನತಾ ಪ್ರಾತಿನಿಧ್ಯ ಕಾಯ್ದೆ, 1960ರ ಮತದಾರರ ನೋಂದಣಿ ನಿಯಮಗಳು, 1961ರ ಚುನಾವಣಾ ನಿರ್ವಹಣೆ ನಿಯಮಗಳು ಮತ್ತು ಚುನಾವಣಾ ಆಯೋಗದ ಸೂಚನೆಗಳಿಗೆ ಅನುಗುಣವಾಗಿ ಪಾರದರ್ಶಕವಾಗಿ ಕೆಲಸ ಮಾಡುವಂತೆ ಎಲ್ಲಾ ಅಧಿಕಾರಿಗಳಿಗೆ ಕರೆ ನೀಡಿದರು.
‘‘ರಾಜಕೀಯ ಪಕ್ಷಗಳಿಗೆ ಲಭ್ಯರಿರುವಂತೆ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮುಖ್ಯ ಚುನಾವಣಾ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಖ್ಯ ಚುನಾವಣಾ ಅಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮತದಾರ ನೋಂದಣಾಧಿಕಾರಿ ತಮ್ಮ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸರ್ವಪಕ್ಷ ಸಭೆಗಳನ್ನು ನಡೆಸಿ ಸಂಬಂದಿತ ಕಾಯ್ದೆಗಳ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಸೂಚನೆಯನ್ನು ಅವರು ನೀಡಿದರು’’ ಎಂದು ಚುನಾವಣಾ ಆಯೋಗದ ಹೇಳಿಕೆಯೊಂದು ತಿಳಿಸಿದೆ.
ಈ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮಾರ್ಚ್ 31ರ ಒಳಗೆ ವರದಿ ಸಲ್ಲಿಸುವಂತೆ ಅವರು ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಿದರು.