ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಂಗ ನೇಮಕಾತಿಗೆ ಕೇಂದ್ರದ ವಿಳಂಬ
Center's delay in judicial appointments recommended by collegium
ಸುಪ್ರೀಂಕೋರ್ಟ್| Photo: PTI
ಹೊಸದಿಲ್ಲಿ: ನ್ಯಾಯಾಧೀಶರ ನೇಮಕಾತಿ ಹಾಗೂ ವರ್ಗಾವಣೆಗೆ ಕೊಲಿಜಿಯಂ ಶಿಫಾರಸು ಮಾಡಿದವರ ಹೆಸರುಗಳನ್ನು ಅನುಮೋದಿಸುವಲ್ಲಿ ಕೇಂದ್ರ ಸರಕಾರವು ವಿಳಂಬಿಸುತ್ತಿರುವುದರ ವಿರುದ್ಧ ಸಲ್ಲಿಸಲಾದ ಎರಡು ಅರ್ಜಿಗಳ ಆಲಿಕೆಯನ್ನು ಸುಪ್ರೀಂಕೋರ್ಟ್ ಸೋಮವಾರ ನಡೆಸಲಿದೆ.
ಸಂಜಯ ಕಿಶನ್ ಕೌಲ್,ಸುಧಾಂಶು ಧುಲಿಯಾ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವು ಅರ್ಜಿಗಳ ಆಲಿಕೆಯನ್ನು ನಡೆಸುತ್ತಿದೆ. ಉನ್ನತ ನ್ಯಾಯಾಂಗದ ಹುದ್ದೆಗಳ ನೇಮಕಾತಿಗೆ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರುಗಳನ್ನು ಕೇಂದ್ರ ಸರಕಾರವು ಆಯ್ದು ಆಯ್ಕೆ ಮಾಡುತ್ತಿದೆಯೆಂದು ಸುಪ್ರೀಂಕೋರ್ಟ್ ನ. 7ರಂದು ಅರ್ಜಿಗಳ ಆಲಿಕೆಯನ್ನು ನಡೆಸಿದ ಸಂದರ್ಭ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.
ಒಂದು ಹೈಕೋರ್ಟಿನಿಂದ ಇನ್ನೊಂದು ಹೈಕೋರ್ಟ್ಗೆ ನ್ಯಾಯಾಧೀಶರುಗಳ ವರ್ಗಾವಣೆಯ ಶಿಫಾರಸುಗಳಿಗೆ ಅನುಮೋದನೆ ನೀಡಲು ಕೇಂದ್ರ ಸರಕಾರವು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದಕ್ಕೂ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.
ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರುಗಳ ನೇಮಕಾತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ 14 ಶಿಫಾರಸುಗಳು ಅನುಮೋದನೆಗೆ ಬಾಕಿಯಿದೆ. ಆದರೆ ಕೇಂದ್ರದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲವೆಂದು ಸುಪ್ರೀಂಕೋರ್ಟ್ ನ್ಯಾಯಪೀಠವು ತಿಳಿಸಿದೆ. ಇವುಗಳ ಪೈಕಿ ಐದು ಹೆಸರುಗಳನ್ನು ಎರಡನೇ ಬಾರಿ ಶಿಫಾರಸು ಮಾಡಲಾಗಿದ್ದರೂ ಯಾವುದೇ ಉತ್ತರಬಂದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದು ನ್ಯಾಯಪೀಠ ಪ್ರತಿಪಾದಿಸಿದೆ.
ಕೊಲಿಜಿಯಂ ವ್ಯವಸ್ಥೆಯ ಮೂಲಕ ನ್ಯಾಯಾಧೀಶರ ನೇಮಕಾತಿ ವ್ಯವಸ್ಥೆಯು ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರಕಾರದ ನಡುವೆ ಸಂಘರ್ಷದ ಕೇಂದ್ರ ಬಿಂದುವಾಗಿ ಪರಿಣಮಿಸಿದೆ.
ಸುಪ್ರೀಂಕೋರ್ಟ್, ಹೈಕೋರ್ಟ್ ಸೇರಿದಂತೆ ಉನ್ನತ ನ್ಯಾಯಾಂಗ ಹುದ್ದೆಗಳ ನೇಮಕಾತಿಗೆ 2021ರಲ್ಲಿ ಸರ್ವೋಚ್ಚ ನ್ಯಾಯಾಲಯ ನಿಗದಿಪಡಿಸಿದ ಕಾಲಮಿತಿಯನ್ನು ಅನುಸರಿಸದಿರುವ ಮೂಲಕ ಕೇಂದ್ರ ಕಾನೂನು ಹಾಗೂ ನ್ಯಾಯಾಂಗ ಸಚಿವಾಲಯ ನ್ಯಾಯಾಂಗ ನಿಂದನೆ ನಡೆಸಿದ್ದು, ಅದರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ನ್ಯಾಯವಾದಿಗಳ ಸಂಘ ಸೇರಿದಂತೆ ಸಲ್ಲಿಸಲಾದ ಅರ್ಜಿಗಳ ಆಲಿಕೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.