ಕೇಂದ್ರದಿಂದ ಮಾಹಿತಿ ತಂತ್ರಜ್ಞಾನ ಕಾನೂನಿಗೆ ತಿದ್ದುಪಡಿ ಜಾರಿ
ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಿಗಾಗಿ ರೂಪಿಸಲಾಗಿರುವ ಮಾರ್ಗದರ್ಶಿ ಸೂತ್ರಗಳ ಕುರಿತು ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ‘ಎಕ್ಸ್’ ಜೊತೆ ಕಾನೂನು ಸಂಘರ್ಷವೇರ್ಪಟ್ಟ ಬೆನ್ನಲ್ಲೇ ಕೇಂದ್ರ ಸರಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿಯನ್ನು ಬುಧವಾರ ಜಾರಿಗೆ ತಂದಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಸುರಕ್ಷತೆಯನ್ನು ತರುವುದಕ್ಕಾಗಿ ಈ ತಿದ್ದುಪಡಿ ತರಲಾಗಿದೆಯೆಂದು ಅದು ಹೇಳಿದೆ.
ನೂತನ ತಿದ್ದುಪಡಿಯಲ್ಲಿ ಕಾನೂನುಬಾಹಿರ ಮಾಹಿತಿಯನ್ನು ತೆಗೆದುಹಾಕುವ ಕುರಿತು ಆದೇಶಗಳನ್ನು ಜಾರಿಗೊಳಿಸುವ ಅಧಿಕಾರಿಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಅಲ್ಲದೆ ಮಾಹಿತಿಯನ್ನು ತೆಗೆದುಹಾಕುವ ಕುರಿತ ಆದೇಶಗಳನ್ನು ಜಾರಿಗೊಳಿಸಿರುವುದಕ್ಕೆ ಕಾನೂನಿನ ಆಧಾರವನ್ನು ಹಾಗೂ ಶಾಸನಾತ್ಮಕ ನಿಯಮವನ್ನು ಅಧಿಕಾರಿಗಳು ಸ್ಪಷ್ಟವಾಗಿ ವಿವರಿಸಬೇಕಾಗುತ್ತದೆ.
ಕೇಂದ್ರ ಇಲೆಕ್ಟಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬುಧವಾರ 2021ರ ಮಾಹಿತಿ ತಂತ್ರಜ್ಞಾನ ತಿದ್ದುಪಡಿಗಳು (ಮಧ್ಯವರ್ತಿ ಮಾರ್ಗದರ್ಶಿಸೂತ್ರಗಳು ಹಾಗೂ ಡಿಜಿಟಲ್ ಮಾಧ್ಯಮ ನೈತಿಕತೆ ಸಂಹಿತೆ) ನಿಯಮಗಳ ಜಾರಿ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ತಡೆಗಟ್ಟಲು ಸರಕಾರಿ ಅಧಿಕಾರಿಗಳಿಗೆ ಇರುವ ಅಧಿಕಾರವನ್ನು ಪ್ರಶ್ನಿಸಿ ‘ಎಕ್ಸ್’ಕಾರ್ಪೋರೇಟ್ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ ಒಂದು ತಿಂಗಳ ಬಳಿಕ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.