×
Ad

ರಷ್ಯಾ ಸೇನೆಗೆ ಸೇರದಂತೆ ಭಾರತೀಯ ಪ್ರಜೆಗಳಿಗೆ ತುರ್ತು ಎಚ್ಚರಿಕೆ ನೀಡಿದ ಕೇಂದ್ರ ಸರಕಾರ

Update: 2025-09-11 15:08 IST

Photo |AFP

ಹೊಸದಿಲ್ಲಿ,ಸೆ.11: ಹಲವಾರು ಭಾರತೀಯರನ್ನು ರಷ್ಯಾದ ಸೇನೆಗೆ ಸೇರಿಸಿಕೊಳ್ಳಲಾಗಿದೆ ಮತ್ತು ಯುದ್ಧ ವಲಯಗಳಲ್ಲಿ ನಿಯೋಜಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ರಷ್ಯಾದ ಸೇನೆಯನ್ನು ಸೇರದಂತೆ ಭಾರತೀಯ ಪ್ರಜೆಗಳಿಗೆ ತನ್ನ ಎಚ್ಚರಿಕೆಯನ್ನು ಪುನರುಚ್ಚರಿಸಿದೆ.

ಕೇಂದ್ರವು ಕಳೆದೊಂದು ವರ್ಷದಿಂದಲೂ ಹಲವಾರು ಸಂದರ್ಭಗಳಲ್ಲಿ ಇಂತಹ ನೇಮಕಾತಿಗಳ ಅಪಾಯಗಳನ್ನು ಆಗಾಗ್ಗೆ ಒತ್ತಿ ಹೇಳಿದೆ ಮತ್ತು ರಷ್ಯಾದ ಸೇನೆಯನ್ನು ಸೇರುವುದರಿಂದ ದೂರವುಳಿಯುವಂತೆ ಭಾರತೀಯ ಪ್ರಜೆಗಳನ್ನು ಆಗ್ರಹಿಸಿದೆ ಎಂದು ಎಂಇಎ ವಕ್ತಾರ ರಣಧೀರ ಜೈಸ್ವಾಲ್ ಅವರು ಗುರುವಾರ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

‘ನಾವು ಈ ವಿಷಯದಲ್ಲಿ ದಿಲ್ಲಿ ಮತ್ತು ಮಾಸ್ಕೋದಲ್ಲಿನ ರಷ್ಯಾದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಈ ಪರಿಪಾಠವನ್ನು ಅಂತ್ಯಗೊಳಿಸುವಂತೆ ಮತ್ತು ನಮ್ಮ ಪ್ರಜೆಗಳನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದೇವೆ. ನಾವು ಪೀಡಿತ ಭಾರತೀಯ ನಾಗರಿಕರ ಕುಟುಂಬಗಳೊಂದಿಗೂ ಸಂಪರ್ಕದಲ್ಲಿದ್ದೇವೆ’ ಎಂದು ತಿಳಿಸಿರುವ ಜೈಸ್ವಾಲ್, ‘ರಷ್ಯಾದ ಸೇನೆಗೆ ಸೇರ್ಪಡೆಯು ಅಪಾಯದಿಂದ ತುಂಬಿರುವುದರಿಂದ ಅಂತಹ ಯಾವುದೇ ಕೊಡುಗೆಗಳಿಂದ ದೂರವಿರುವಂತೆ ನಾವು ಮತ್ತೊಮ್ಮೆ ಎಲ್ಲ ಭಾರತೀಯ ಪ್ರಜೆಗಳನ್ನು ಬಲವಾಗಿ ಒತ್ತಾಯಿಸುತ್ತೇವೆ ’ ಎಂದು ಹೇಳಿದ್ದಾರೆ.

ನಮಗೆ ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗದ ಆಮಿಷವೊಡ್ಡಿ ರಷ್ಯಾಕ್ಕೆ ಪ್ರಯಾಣಿಸುವಂತೆ ಮಾಡಲಾಗಿತ್ತು, ಆದರೆ ಇಲ್ಲಿ ಬಂದ ಬಳಿಕ ಮುಂಚೂಣಿಯ ಯುದ್ಧರಂಗಕ್ಕೆ ನಿಯೋಜಿಸುವ ಮೂಲಕ ನಮ್ಮನ್ನು ವಂಚಿಸಲಾಗಿದೆ ಎಂದು ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿರುವ ಇಬ್ಬರು ಭಾರತೀಯರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದ ಬಳಿಕ ಎಂಇಎ ಈ ಎಚ್ಚರಿಕೆಯನ್ನು ಹೊರಡಿಸಿದೆ.

ನವಂಬರ್ 2024ರಲ್ಲಿ ರಷ್ಯನ್ ಪಡೆಗಳು ವಶಪಡಿಸಿಕೊಂಡ ಸೆಲಿಡೋವ್ ಪಟ್ಟಣದಿಂದ ದೂರವಾಣಿ ಮೂಲಕ ಮಾತನಾಡಿರುವ ಈ ಇಬ್ಬರು,ಇನ್ನೂ ಕನಿಷ್ಠ 13 ಭಾರತೀಯರು ಇಂತಹುದೇ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅವರೆಲ್ಲರೂ ಕಳೆದ ಆರು ತಿಂಗಳಲ್ಲಿ ವಿದ್ಯಾರ್ಥಿ ಅಥವಾ ಸಂದರ್ಶಕ ವೀಸಾಗಳಲ್ಲಿ ರಷ್ಯಾಕ್ಕೆ ಪ್ರಯಾಣಿಸಿದ್ದರು. ಏಜೆಂಟ್ ಅವರಿಗೆ ನಿರ್ಮಾಣ ಕ್ಷೇತ್ರದಲ್ಲಿ ಕೆಲಸದ ಭರವಸೆ ನೀಡಿದ್ದ, ಆದರೆ ಅವರನ್ನು ರಷ್ಯಾದ ಸೇನೆಗೆ ಸೇರಿಸಲಾಗಿದೆ ಎಂದೂ ವರದಿಯು ಬಹಿರಂಗಗೊಳಿಸಿದೆ.

ರಷ್ಯಾದ ಮಿಲಿಟರಿ ಘಟಕಗಳಲ್ಲಿ ಕುಕ್ ಮತ್ತು ಹೆಲ್ಪರ್‌ಗಳು ಸೇರಿದಂತೆ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಎಲ್ಲ ಭಾರತೀಯರನ್ನು ಬಿಡುಗಡೆಗೊಳಿಸುವಂತೆ ಭಾರತವು ನಿರಂತರವಾಗಿ ಒತ್ತಾಯಿಸುತ್ತಿದೆ. ಉಕ್ರೇನ್-ರಷ್ಯಾ ಯುದ್ಧದಲ್ಲಿ ಕನಿಷ್ಠ ಒಂಭತ್ತು ಭಾರತೀಯರು ಮೃತಪಟ್ಟ ಬಳಿಕ ಭಾರತ ಸರಕಾರಕ್ಕೆ ಇದು ಪ್ರಮುಖ ವಿಷಯವಾಗಿದೆ. ಕಳೆದ ವರ್ಷ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಎರಡು ಪ್ರತ್ಯೇಕ ಮಾತುಕತೆಗಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವೈಯಕ್ತಿಕವಾಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News