×
Ad

ಕೋಚಿಂಗ್ ಸೆಂಟರ್‌ ಗಳು ಮತ್ತು ಪ್ರವೇಶ ಪರೀಕ್ಷೆಗಳ ಕುರಿತು ಪರಿಶೀಲನೆಗೆ ಸಮಿತಿ ರಚಿಸಿದ ಕೇಂದ್ರ ಸರಕಾರ

Update: 2025-06-21 12:48 IST

ಸಾಂದರ್ಭಿಕ ಚಿತ್ರ (credit: Grok)

ಹೊಸದಿಲ್ಲಿ : ಕೋಚಿಂಗ್ ಸೆಂಟರ್‌ಗಳ ಮೇಲಿನ ವಿದ್ಯಾರ್ಥಿಗಳ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ಪರಿಣಾಮಕಾರಿತ್ವ ಮತ್ತು ನ್ಯಾಯಸಮ್ಮತತೆಯನ್ನು ನಿರ್ಣಯಿಸುವ ಸಲುವಾಗಿ ಕ್ರಮಗಳನ್ನು ಸೂಚಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿನೀತ್ ಜೋಶಿ ನೇತೃತ್ವದಲ್ಲಿ 9 ಸದಸ್ಯರ ಸಮಿತಿಯನ್ನು ರಚಿಸಿದೆ.

ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳ ಮೇಲೆ ಅವಲಂಬಿತರಾಗಲು ಕಾರಣವಾಗುವ ಪ್ರಸ್ತುತ ಶಾಲಾ ವ್ಯವಸ್ಥೆಯಲ್ಲಿನ ಅಂತರಗಳ ಬಗ್ಗೆ, ವಿಶೇಷವಾಗಿ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ವಿಶ್ಲೇಷಣಾತ್ಮಕ ಕೌಶಲ್ಯಗಳು ಮತ್ತು ನಾವೀನ್ಯತೆಯ ಮೇಲಿನ ಸೀಮಿತ ಗಮನ ಮತ್ತು ಕಂಠಪಾಠ ಮಾಡುವ ಅಭ್ಯಾಸಗಳ ಬಗ್ಗೆಯೂ ಸಮಿತಿಯು ಚಿಂತನೆ ನಡೆಸಲಿದೆ.

ಕೋಚಿಂಗ್ ಕೇಂದ್ರಗಳ ಬಗೆಗಿನ ದೂರುಗಳು, ಅಲ್ಲಿನ ಮೂಲಭೂತ ಸಮಸ್ಯೆಗಳು, ‘ಡಮ್ಮಿ ಸ್ಕೂಲ್’ (ನೆಪಮಾತ್ರ ಶಾಲೆ)ಗಳು, ಪ್ರವೇಶ ಪರೀಕ್ಷೆಗಳ ನ್ಯಾಯೋಚಿತತೆ ಮತ್ತು ಪರಿಣಾಮದ ಕುರಿತು ಸಮಿತಿಯು ಪರಿಶೀಲಿಸಲಿದೆ.

ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿನೀತ್ ಜೋಶಿ ಅವರಲ್ಲದೆ, ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಂಟಿ ಕಾರ್ಯದರ್ಶಿ, ಐಐಟಿ ಮದ್ರಾಸ್, ಎನ್ಐಟಿ ತಿರುಚ್ಚಿ, ಐಐಟಿ ಕಾನ್ಪುರ ಮತ್ತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಪ್ರತಿನಿಧಿಗಳು, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಮತ್ತು ಖಾಸಗಿ ಶಾಲೆಯ ತಲಾ ಓರ್ವ ಪ್ರಾಂಶುಪಾಲರು ಸಮಿತಿಯ ಸದಸ್ಯರಾಗಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News