ಹೊಸದಿಲ್ಲಿ | ಶ್ರೇಯಾ ಘೋಷಾಲ್ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು
PC | timesofindia
ಹೊಸದಿಲ್ಲಿ: ಒಡಿಶಾ ರಾಜಧಾನಿ ಕಟಕ್‍ನ ಬಲಿಜಾತ್ರಾ ಮೈದಾನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಬಾಲಿವುಡ್ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಕಾರ್ಯಕ್ರಮದಲ್ಲಿ ಅಭಿಮಾನಿಗಳು ವೇದಿಕೆಯತ್ತ ನುಗ್ಗಿದಾಗ ಸಂಭವಿಸಿದ ನೂಕುನುಗ್ಗಲು ಮತ್ತು ಗೊಂದಲದಲ್ಲಿ ಒಬ್ಬರು ಗಾಯಗೊಂಡಿದ್ದಾರೆ.
ಘೋಷಾಲ್ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ದೊಡ್ಡ ಸಂಖ್ಯೆಯ ಪ್ರೇಕ್ಷಕರು ವೇದಿಕೆಯತ್ತ ನುಗ್ಗಿದರು ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಇದರಿಂದಾಗಿ ಸಂಘಟಕರು ತಾತ್ಕಾಲಿಕವಾಗಿ ಕಾರ್ಯಕ್ರಮ ಸ್ಥಗಿತಗೊಳಿಸಬೇಕಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ ಬಳಿಕ ಕಾರ್ಯಕ್ರಮ ಪುನರಾರಂಭವಾಯಿತು.
ನೂಕಾಟ, ತಳ್ಳಾಟದಲ್ಲಿ ಒಬ್ಬ ವ್ಯಕ್ತಿ ಮೂರ್ಚೆ ತಪ್ಪಿ ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಲಿ ಜಾತ್ರೆಯ ಕೊನೆಯ ದಿನ ಆಯೋಜಿಸಿದ್ದ ಶ್ರೇಯಾ ಘೋಷಾಲ್ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಿದ್ದರು.
ಆದಾಗ್ಯೂ ಕಾರ್ಯಕ್ರಮದಲ್ಲಿ ಭಾರಿ ಗೊಂದಲವಾಗಿದೆ ಎಂಬ ವರದಿಗಳನ್ನು ಕಟಕ್ ಪೊಲೀಸ್ ಆಯುಕ್ತ ಎಸ್.ದೇವದತ್ತ ಸಿಂಗ್ ನಿರಾಕರಿಸಿದ್ದಾರೆ. "ಅನಪೇಕ್ಷಿತ ಪರಿಸ್ಥಿತಿ ನಿರ್ಮಾಣವಾಗಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ನಿಜ. ಆದರೆ ನಾವು ಸೂಕ್ತವಾಗಿ ನಿಭಾಯಿಸಿದೆವು. ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ" ಎಂದು ಹೇಳಿದ್ದಾರೆ. ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ನಿಯಂತ್ರಣ ಕೊಠಡಿಯಿಂದ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಸಾರ್ವಜನಿಕ ಘೋಷಣಾ ವ್ಯವಸ್ಥೆ ಮೂಲಕ ಶಾಂತಿಯಿಂದ ಇರುವಂತೆ ಮನವಿ ಮಾಡಿದರು.