ಚತ್ತೀಸ್‌ಗಢ | ಗುಂಡಿನ ಕಾಳಗ ; 8 ಶಂಕಿತ ಮಾವೋವಾದಿಗಳ ಹತ್ಯೆ
ಸಾಂದರ್ಭಿಕ ಚಿತ್ರ (PTI)
ಬಿಜಾಪುರ : ಚತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆ ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ 8 ಮಂದಿ ಶಂಕಿತ ಮಾವೋವಾದಿಗಳು ಹತರಾಗಿದ್ದಾರೆ.
ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್, ವಿಶೇಷ ಕಾರ್ಯ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ಅದರ ವಿಶೇಷ ಘಟಕ ಕೋಬ್ರಾ ಗಂಗಲೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಬೆಳಗ್ಗೆ ಸುಮಾರು 8.30ಕ್ಕೆ ಜಂಟಿ ಕಾರ್ಯಾಚರಣೆ ನಡೆಸಿದ ಸಂದರ್ಭ ಈ ಗುಂಡಿನ ಕಾಳಗ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಾವೋವಾದಿಗಳ ಇರುವಿಕೆಗೆ ಬಗ್ಗೆ ಬೇಹುಗಾರಿಕೆ ಮಾಹಿತಿಯ ಆಧಾರದಲ್ಲಿ ಶುಕ್ರವಾರ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ ರಾಜ್ ಪಿ. ಹೇಳಿದ್ದಾರೆ.
ಸೇನಾ ವರದಿಯ ಪ್ರಕಾರ ಗುಂಡಿನ ಕಾಳಗದಲ್ಲಿ 8 ಮಂದಿ ಶಂಕಿತ ಮಾವೋವಾದಿಗಳು ಹತರಾಗಿದ್ದಾರೆ ಎಂಬುದನ್ನು ಪೊಲೀಸ್ ಅಧಿಕಾರಿ ದೃಢಪಡಿಸಿದ್ದಾರೆ. ಆದರೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಈ ವರ್ಷ ಭದ್ರತಾ ಪಡೆಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ ಶಂಕಿತ ಮಾವೋವಾದಿಗಳ ಸಂಖ್ಯೆ 48ಕ್ಕೆ ತಲುಪಿದೆ.
48 ಮಾವೋವಾದಿಗಳಲ್ಲಿ 16 ಮಂದಿ ಒಡಿಶಾದ ನುವಾಪಾಡ ಜಿಲ್ಲೆಯೊಂದಿಗಿನ ಚತ್ತೀಸ್‌ಗಡದ ಗಡಿಗೆ ಸಮೀಪ ಇರುವ ಉಡಾಂತಿ-ಸಿತಾನದಿ ಹುಲಿ ಸಂರಕ್ಷಣಾ ಕುಲ್ಹಾದಿಘಾಟ್ ಪ್ರದೇಶದಲ್ಲಿ ಜನವರಿ 21ರಂದು ಹತ್ಯೆಯಾಗಿದ್ದಾರೆ. 12 ಮಂದಿ ಬಿಜಾಪುರ ಜಿಲ್ಲೆಯಲ್ಲಿ ಜನವರಿ 16ರಂದು ಹತ್ಯೆಯಾಗಿದ್ದಾರೆ. 9 ಭದ್ರತಾ ಪಡೆ ಸಿಬ್ಬಂದಿ ಹಾಗೂ ನಾಗರಿಕರು ಕೂಡ ಈ ವರ್ಷ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.